ಕೈ ಮಿಲಾಯಿಸಿದ ಬಿಜೆಪಿ ಸದಸ್ಯರ ಸ್ಥಾನ ರದ್ದು?

web
Published on

ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಮೂರ್ತಿ ಮಾಹಿತಿ- ಕಾನೂನು ಹೋರಾಟಕ್ಕೂ ಸಿದ್ಧ

ಆನೇಕಲ್: ಕಾಂಗ್ರೆಸ್ ಜತೆ ಕೈಜೋಡಿಸಿರುವ ಬಿಜೆಪಿ ಬೆಂಬಲಿತ ಆನೇಕಲ್ ಪುರಸಭೆ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಮೂರ್ತಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನೇಕಲ್ ಪುರಸಭೆ ಚುನಾವಣೆಗೆ ಬಿಜೆಪಿಯಿಂದ ಶಾಮಲಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಈ ಮೊದಲೇ ವಿಪ್ ಕೂಡ ಜಾರಿ ಮಾಡಿದ್ದು, ಇದಕ್ಕೆ ಸಹಿ ಕೂಡ ಹಾಕಿದ್ದ ಸದಸ್ಯರು, ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಮತಚಲಾಯಿಸಿದ್ದು, ಕಾಂಗ್ರೆಸ್ ಸಹಾಯದಿಂದ ಸುಧಾ ನಿರಂಜನ್ ಅಧ್ಯಕ್ಷರಾಗಿದ್ದು, ತಾಯಿ ಸಮಾನವಾದ ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚುನಾವಣೆ ದಿನ 11 ಗಂಟೆವರೆಗೆ ನಮ್ಮ ಜತೆ ಇದ್ದ ಇಬ್ಬರೂ ಸದಸ್ಯರು ಬಳಿಕ ಕಾಂಗ್ರೆಸ್ ಜತೆಗೆ ಐದು ಜನ ಸೂಚಕರನ್ನು ಸಿದ್ಧ ಮಾಡಿಕೊಂಡು ಚುನಾವಣೆಗೆ ತೆರಳಿದ್ದಾರೆ. ಶಾಸಕರು ಕೊಟ್ಟ ಹಣ ಹಾಗೂ ಅಧಿಕಾರದ ಆಸೆಯಿಂದ ಪಕ್ಷ ವಿರೋಧಿಯಾಗಿ ಮತ ಹಾಕಿದ್ದು, ಇಬ್ಬರ ಸದಸ್ಯತ್ವವನ್ನು ರದ್ದು ಮಾಡಲಾಗುವುದು. ಕೋರ್ಟ್ ಮೊರೆ ಹೋದರೆ ಆ ಹೋರಾಟಕ್ಕೂ ಪಕ್ಷ ಸಿದ್ಧವಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಜವಾಬ್ದಾರಿಯಿಂದ ಇರಬೇಕಾದ ಆಡಳಿತ ಪಕ್ಷದ ಸದಸ್ಯರೇ ಬೇರೆ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಪಕ್ಷವನ್ನು ನಾವು ತಾಯಿ ಎಂದು ಪರಿಗಣಿಸುತ್ತೇವೆ. ಆದರೆ ಸದಸ್ಯರು ಅಧಿಕಾರದ ಆಸೆಗೆ ಕಾಂಗ್ರೆಸ್ ಜತೆ ಕೈಜೋಡಿಸಿದ್ದು, ಅಂತಹವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ. ಹಾಗೆಯೇ, ಮುಂದೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮಯವೇ ಇಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ತಾಲೂಕಿನಲ್ಲಿಯೂ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಆನೇಕಲ್ ಪುರಸಭೆಗೆ ಬಿಜೆಪಿಯಿಂದ ಗೆದ್ದ ಪುರಸಭಾ ಸದಸ್ಯರಿಗೆ ಮತ ಹಾಕುವ ಪರಿಸ್ಥಿತಿ ಕಾಂಗ್ರೆಸ್‌ಗೆ ಎದುರಾಗಿದೆ ಎಂದು ವ್ಯಂಗ್ಯವಾಡಿದರು.
ನಾರಾಯಣಸ್ವಾಮಿ ಕೈ ಮೇಲಾಗಬಾರದು ಎಂದು ನಮ್ಮ ಪಕ್ಷದವರಿಂದಲೇ ಈ ಕೆಲಸವಾಗಿದೆ. ನಾನು ಎಂದೂ ಪಕ್ಷವಿರೋಧಿ ಕೆಲಸ ಮಾಡಿದವನಲ್ಲ. ಆದರೆ ಪಕ್ಷದಲ್ಲಿ ಇದ್ದುಕೊಂಡು ಈ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯರಾದ ನಾರಾಯಣಸ್ವಾಮಿ, ಕೆ.ನಾಗರಾಜು, ನರಸಿಂಹ ರೆಡ್ಡಿ, ಬಿಜೆಪಿ ಮುಖಂಡರಾದ ಯಂಗಾರೆಡ್ಡಿ, ಬಂಡಾಪುರ ರಾಮಚಂದ್ರ, ಎನ್. ಬಸವರಾಜು, ಜೆ.ನಾರಾಯಣಪ್ಪ, ಸಿಡಿ ಹೊಸಕೋಟೆ ರವಿ, ದಿನ್ನೂರು ರಾಜು, ಸತೀಶ್, ಟೌನ್ ರಘು, ಪುರಸಭಾ ಸದಸ್ಯರಾದ ಶ್ರೀಕಾಂತ್,ಯುವ ಮುಖಂಡರಾದ ಅರವಿಂದ್, ಚಂದ್ರು, ಅಶೋಕ್, ಭರತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net