

ಬೆಂಗಳೂರು ತಾಂತ್ರಿಕ ಶಿಕ್ಷಣ ಮಾಡುವ ಕನ್ನಡಿಗರಿಗೆ ಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಖುಷಿಯ ಸುದ್ದಿಯನ್ನು ನೀಡಿದೆ.
ಮುಂದಿನ 5 ವರ್ಷಗಳ ಕಾಲ ಯುವಿಸಿಇಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಸೀಟು ಹಂಚಿಕೆಯಾಗಲಿದೆ ಎಂದು ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ. ಮುತ್ತುರಾಮನ್ ತಿಳಿಸಿದರು.
ಕೆ.ಆರ್. ವೃತ್ತದಲ್ಲಿರುವ ಯುವಿಸಿಇ ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಿಸಿಇಗೆ ಮೊದಲಿನಿಂದಲೂ ಕೆಇಎ ಮೂಲಕವೇ ಸೀಟು ಹಂಚಿಕೆಯಾಗುತ್ತಿದೆ. ಐಐಟಿ ಮಾದರಿಯಲ್ಲಿ ಅಭಿವೃದ್ಧಿಯಾದ ಬಳಿಕ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಜೆಇಇ ಪ್ರವೇಶ ಪರೀಕ್ಷೆ ಪ್ರವೇಶ ಕಲ್ಪಿಸಬೇಕಿತ್ತು. ಆದರೆ, ಮೂಲಸೌಕರ್ಯ, ಸಿಬ್ಬಂದಿ, ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾದ ಬಳಿಕ ಜೆಇಇ ಪ್ರವೇಶ ಕಲ್ಪಿಸಲಾಗುತ್ತದೆ. ಅಲ್ಲಿಯವರೆಗೂ ಶೇ.100 ಸೀಟುಗಳಿಗೆ ಕೆಇಎ ಮೂಲಕವೇ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಜೆಇಇ ಮೂಲಕ ಪ್ರವೇಶ ಕಲ್ಪಿಸಿದಾಗ ಹೊರ ರಾಜ್ಯದ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆಯುತ್ತಾರೆ. ಆದರೆ, ಕೆಇಎ ಮೂಲಕ ಪ್ರವೇಶ ಕಲ್ಪಿಸಿದಾಗ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಮೂಲಸೌಕರ್ಯ, ಸಿಬ್ಬಂದಿ ನೇಮಕ, ಉಪಕರಣಗಳು ಖರೀದಿ ಸೇರಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಅಭಿವೃದ್ಧಿಗಾಗಿ ಸರ್ಕಾರಕ್ಕೆ 850 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ. ಮುತ್ತುರಾಮನ್ ತಿಳಿಸಿದರು.
225 ಕೋಟಿ ರೂ. ಸಿಬ್ಬಂದಿ ವೇತನ, ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ, 125 ಕೋಟಿ ರೂ. ನಿರ್ವಹಣೆ ಮತ್ತು 500 ಕೋಟಿ ರೂ.ಗಳಿಗೆ ಮೂಲಸೌಕರ್ಯ ಮತ್ತು ಉಪಕರಣಗಳ ಖರೀದಿಗಾಗಿ 850 ಕೋಟಿ ರೂ. ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.