ಋತು ಆಧಾರಿತ ಕೃಷಿ ಪದ್ಧತಿ ವರದಾನ

25 vikram 4
????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರೈತರಿಗೆ ಋತು ಆಧಾರಿತ ಕೃಷಿ ಪದ್ಧತಿ ವರದಾನವಾಗಿದೆ. ಕೃಷಿಕರು ತಮ್ಮ ಕಸುಬನ್ನು ಉದ್ಯಮವನ್ನಾಗಿಸಬೇಕು ಎಂದು ಪ್ರಗತಿಪರ ಕೃಷಿ ತಜ್ಞೆ ಡಾ. ಕವಿತಾ ಮಿಶ್ರಾ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಬೆಲ್ಲದ ಕೃಷಿ ಮತ್ತು ಶಿಕ್ಷಣ ಪ್ರತಿಷ್ಠಾನ ದತ್ತಿ ಉದ್ಘಾಟನೆ ಮತ್ತು ಶ್ರೇಷ್ಠ ಕೃಷಿ ಸೇವಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ರೈತರು ಋತುಮಾನಕ್ಕೆ ತಕ್ಕಂತೆ ಹಣ್ಣು, ವಿವಿಧ ರೀತಿಯ ಮಿಶ್ರ ಬೆಳೆ ಬೆಳೆಯಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿ ಅನುರಿಸಿದರೆ ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ. ದೀರ್ಘಾವಧಿಯ ಅರಣ್ಯ ಕೃಷಿ, ಪಶು ಸಂಗೋಪನೆ ಹಾಗೂ ಉಪ ಕಸುಬುಗಳನ್ನು ಕೈಕೊಂಡರೆ ರೈತರಿಗೆ ನಿರಂತರ ಆದಾಯ ಬರುತ್ತದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಶಸ್ತಿ ನೀಡಿ ಮಾತನಾಡಿ, ಪ್ರಗತಿಪರ ಕೃಷಿಕ ಮಹಿಳೆಗೆ ಈ ಪ್ರಶಸ್ತಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಕೊಟ್ಟಿದ್ದು, ಇಡೀ ಸ್ತ್ರೀ ಕುಲಕ್ಕೆ ಸಂತಸ ತಂದಿದೆ. ಕವಿತಾ ಮಿಶ್ರಾ ಕೃಷಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ್ದಾರೆ. ಅವರನ್ನು ಮತ್ತು ಇವರಿಗೆ ಸಹಕಾರ ನೀಡಿದ ಕವಿತಾ ಅವರ ಪತಿಯನ್ನು ಜಿಲ್ಲಾಡಳಿತ ಪರವಾಗಿ ಅಭಿನಂದಿಸುತ್ತೇವೆ ಎಂದರು.

ಕೃಷಿ ವಿವಿ ಕುಲಪತಿ ಡಾ. ಪಿ. ಎಲ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಚಂದ್ರಕಾಂತ ಬೆಲ್ಲದ ದತ್ತಿ ಆಶಯ ಕುರಿತು ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಪ್ರಶಾಂತ ಮತ್ತು ಮಹೇಶ ಬೆಲ್ಲದ, ಡಾ. ಗೌರಿ ಬೆಲ್ಲದ ಇದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net