

ಚಿತ್ರದುರ್ಗ: ಕಾನೂನು ಪ್ರಕಾರ ಸ್ಥಾಪಿತವಾದ ಹೊಳಲ್ಕೆರೆ ಕರ್ನಾಟಕ ಫ್ಯಾಮಿಲೀಸ್ ಅಸೋಸಿಯೇಷನ್ ಮನೋರಂಜನಾ ಕೇಂದ್ರದ ಮೇಲೆ ಸರ್ಚ್ ವಾರಂಟ್ ಇಲ್ಲದೆ ಪೊಲೀಸರು ದಾಳಿ ನಡೆಸಿ ತೊಂದರೆ ಕೊಡುತ್ತಿದ್ದಾರೆ ಎಂದು ಅಸೋಷಿಯೇಷನ್ ಅಧ್ಯಕ್ಷ ನಾಗರಾಜ್ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಕ್ಲಬ್‌ಗೆ ಬರುವ ಅಸೋಷಿಯೇಷನ್ ಸದಸ್ಯರನ್ನು ತಪಾಸಣೆಗೆ ಒಳಪಡಿಸಿ ಮುಜುಗರಕ್ಕೆ ಈಡು ಮಾಡುತ್ತಿದ್ದಾರೆ. 2-3 ದಿನಗಳಿಗೊಮ್ಮೆ ಸರ್ಚ್ ವಾರಂಟ್ ಇಲ್ಲದೆ ದಾಳಿ ನಡೆಸುತ್ತಿದ್ದಾರೆ. ಅಂದರ್‌ಬಾಹರ್ ಆಡುತ್ತಿದ್ದೀರಿ ಎಂದು ರಮ್ಮಿ ಆಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗುತ್ತಿದೆ. ಏನಾದರೂ ಲೋಪಗಳಾಗಿದ್ದರೆ ಲಿಖಿತವಾಗಿ ತಿಳಿಸಿ ಎಂದು ಕೋರಿದರೂ ಸ್ಪಂದಿಸದೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ದುಡ್ಡಿನೊಂದಿಗೆ ರಮ್ಮಿ ಆಡುವುದು ಅಪರಾಧವಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದರು.
ತೆರಿಗೆಗಳನ್ನು ಪಾವತಿಸಲಾಗಿದೆ. ಕ್ಲಬ್‌ಗೆ ಸಂಬಂಧಿಸಿದಂತೆ ಕಾನೂನಾತ್ಮಕ ದಾಖಲಾತಿಗಳೂ ಇವೆ. ಆದರೂ ಪೊಲೀಸರು ನನ್ನ ವಿರುದ್ಧ ದಾಖಲಿಸಿದ್ದ 3 ಪ್ರಕರಣಗಳನ್ನು ಹೈಕೋರ್ಟ್ ವಜಾ ಮಾಡಿದೆ. ಜಿಲ್ಲೆಯಲ್ಲಿ 29 ಮನರಂಜನಾ ಕೇಂದ್ರಗಳಿವೆ. ಹೊಳಲ್ಕೆರೆ ತಾಲೂಕೊಂದರಲ್ಲೇ ನಮ್ಮದೂ ಸೇರಿ 7 ಕ್ಲಬ್‌ಗಳಿವೆ. ನಮ್ಮ ಕ್ಲಬ್ ಮೇಲೆ ಯಾವುದೇ ಸಾರ್ವಜನಿಕ ದೂರುಗಳಿಲ್ಲ ಎಂದ ನಾಗರಾಜ್, ಪೊಲೀಸರ ದೌರ್ಜನ್ಯ ಖಂಡಿಸಿ ಹೊಳಲ್ಕೆರೆಯಲ್ಲಿ ಸದ್ಯದಲ್ಲೇ ಪ್ರತಿಭಟನೆ ನಡೆಸುವುದಾಗಿ ಹೇಳಿದರು.