

ಆನೇಕಲ್ : ಎ.ಮೇಡಹಳ್ಳಿ ಸಮೀಪದ ಕಕ್ಕಮಲ್ಲೇಶ್ವರ ಸ್ವಾಮಿ ದೇವಾಲಯದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು 25 ವರ್ಷದ ಹಿಂದೆ ನೆಟ್ಟಿದ್ದ ಏಳು ನೇರಳೆ ಮರಗಳನ್ನು ಗುರುವಾರ ಬೆಳಗ್ಗೆ ಜಮೀನು ನಮ್ಮದು ಎಂದು ಹೇಳಿ ಕೆಲವರು ಕಡಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಬರುತ್ತಿದ್ದಂತೆ ಮರ ಕಡಿಯುತ್ತಿದ್ದವರೆಲ್ಲ ಪರಾರಿಯಾಗಿದ್ದಾರೆ.
ಇಲಾಖೆಗೆ ಮಾಹಿತಿ ತಿಳಿಸದೆ ಕೆಲವರು ಮರಗಳನ್ನು ಕಡಿದಿದ್ದಾರೆ, ಅಧಿಕಾರಿಗಳು ಬರುತ್ತಿದ್ದಂತೆ ಬೈಕ್ ಹಾಗೂ ಮರ ಕಡಿಯಲು ತಂದಿದ್ದ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದಾರೆ.
ಕಡಿದು ಹಾಕಿದ್ದ ಮರಗಳ ಬುಡಕ್ಕೆ ಅಧಿಕಾರಿಗಳು ಸೀಲ್ ಹಾಕಿದ್ದು, ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಕ್ಕ ಮಲ್ಲೇಶ್ವರ ಸ್ವಾಮಿ ದೇವಾಲಯದ ಅಕ್ಕಪಕ್ಕ ಅಕ್ರಮ ಗಣಿಗಾರಿಕೆ ಯಥೇಚ್ಛವಾಗಿ ನಡೆಯುತ್ತಿದೆ. ಅದಲ್ಲದೆ ಭೂಮಿ ಕಬಳಿಸಲು ಮರಗಳ ಮರಣ ಹೋಮ ಮಾಡುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. - ಪ್ರಸನ್ನ ಕುಮಾರ್ ಸ್ಥಳೀಯ ಎ.ಮೇಡಹಳ್ಳಿ ಕುಮಾರ್ ಹಾಗೂ ಮುರುಗನ್ ಎಂಬುವವರು ಮರಗಳನ್ನು ಕಡಿದಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಘಟನೆಗೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. - ಬಾಲಕೃಷ್ಣ ಆನೇಕಲ್ ವಲಯ ಅರಣ್ಯ ಅಧಿಕಾರಿ
.