ಹೊಸ ಭೂಮಿಗಾಗಿ ನಡೆಯುತ್ತಿದೆ ಹುಡುಕಾಟ: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್

kiran-kumar-1
Published on

ಮೈಸೂರು: ನಮ್ಮ ಸೌರವ್ಯೆಹದಲ್ಲಿ ಒಂದು ಗ್ರಹವಾಗಿರುವ ಭೂಮಿಯ ರೀತಿಯಲ್ಲಿಯೇ ಬೇರೆ ಸೌರಮಂಡಲದ ಗ್ರಹಗಳಲ್ಲಿ ಜೀವಿಗಳು ಇವೆ ಯೇ ಎಂಬ ಕುರಿತು ಎಕ್ಸೋಪ್ಲಾನೆಟ್ಸ್ ಅಧ್ಯಯನ ನಡೆಯುತ್ತಿದ್ದು, ಹೊಸ ಭೂಮಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರೂ ಆಗಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನಾಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭ ನಂತರ ಹಮ್ಮಿಕೊಂಡ ಸಂವಾದದಲ್ಲಿ ‘ಅನ್ಯಗ್ರಹದಲ್ಲಿ ಜೀವಿಗಳು ಇವೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದರು.

ಬ್ರಹ್ಮಾಂಡದ ಕುರಿತು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಇದರಿಂದ ಬ್ರಹ್ಮಾಂಡ ಎಷ್ಟೊಂದು ವಿಶಾಲವಾಗಿದೆ ಎಂಬ ಅರಿವು ಬರುತ್ತಿದೆ. ಭೂಮಿ ಸೌರ ಮಂಡಲದ ಒಂದು ಗ್ರಹ. ನಮ್ಮ ಸೌರ ಮಂಡಲದ ರೀತಿಯಲ್ಲಿಯೇ ಹಲವಾರು ಸೌರ ಮಂಡಲಗಳು ಇದ್ದು, ಮಿಲಿಯನ್‌ಗಟ್ಟಲೇ ಗ್ರಹಗಳು ಇವೆ. ಅಲ್ಲಿ ಜೀವಿಗಳು ಇವೆಯೇ ಎಂಬ ಸಂಶೋಧನೆಗಳು ನಡೆಯುತ್ತಿವೆ ಎಂದರು.

ನಮ್ಮ ಸೌರವ್ಯೆಹದ ರೀತಿಯಲ್ಲಿಯೇ ಬೇರೆ ಸೌರಮಂಡಲದಲ್ಲಿ ಅಲ್ಲಿನ ಸೂರ್ಯನ (ನಕ್ಷತ್ರ) ಸುತ್ತ ಸುತ್ತುತ್ತಿರುವ ಗ್ರಹಗಳ ಕುರಿತು ಅಧ್ಯಯನಗಳು ನಡೆಯುತ್ತಿವೆ. ಆ ಗ್ರಹಗಳು ನಮ್ಮ ಭೂಮಿಯ ರೀತಿಯಲ್ಲಿ ಇವೆಯೇ? ಅವುಗಳಲ್ಲಿ ನೀರಿನ ಅಂಶ ಇದೆಯೇ ಎಂಬ ಕುರಿತು ಅಧ್ಯಯ ನಡೆಯುತ್ತಿದೆ. ಆದರೆ, ಅಧ್ಯಯನಗಳಲ್ಲಿ ಇದುವರೆಗೆ ಯಾವುದೇ ನಿರ್ದಿಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಹಾಗಂತ ಭೂಮಿಯ ರೀತಿಯಲ್ಲಿ ಮತ್ತೊಂದು ಗ್ರಹ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಹಸಿವು ನೀಗಿಸುವಲ್ಲಿ ವಿಜ್ಞಾನದ ಕೊಡುಗೆ ಏನು?
ವಿಜ್ಞಾನ, ತಂತ್ರಜ್ಞಾನ ಹೊಸ ಆವಿಷ್ಕಾರಗಳಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉಪಯೋಗವಾಗಿದೆ. ಹವಾಮಾನ ಬದಲಾವಣೆ ಮಾಹಿತಿ ತಕ್ಷಣ ದೊರೆಯುತ್ತಿದೆ. ಮಣ್ಣಿನ ಗುಣಮಟ್ಟ, ಅದರ ತೇವಾಂಶದ ಮಾಹಿತಿ ರೈತರಿಗೆ ಅನುಕೂಲವಾಗುತ್ತಿದೆ. ಸಾಗರದಲ್ಲಿ ಮೀನುಗಾರಿಕೆಗೂ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ. ಈ ರೀತಿ ವಿಜ್ಞಾನ, ತಂತ್ರಜ್ಞಾನದಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ವಾಗಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಏನು?
ಇಡೀ ಭೂಮಿ ತನಗೋಸ್ಕರ ಇದೆ ಎಂಬ ಭಾವನೆ ಮನುಷ್ಯರಲ್ಲಿ ಇದೆ. ಹೀಗಾಗಿ ನಮ್ಮ ಸುತ್ತಮುತ್ತಲಿನ ಪ್ರಕೃತಿ, ಜೀವರಾಶಿ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿವೆ. ಭೂಮಿಯಲ್ಲಿರುವ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ನಾವು ಜನಸಂಖ್ಯೆ ನಿಯಂತ್ರಣದ ಕಡೆಗೆ ಗಮನ ಕೊಡಬೇಕು. ಜನಸಂಖ್ಯೆ ಹೆಚ್ಚಾದಂತೆ ಮೂಲಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಪ್ರಸ್ತುತ ಭೂಮಿಯಲ್ಲಿರುವ ಸಂಪತ್ತಿನ ಆರೂವರೆ ಪಟ್ಟಿನಷ್ಟು ಸಂಪತ್ತಿನ ಅವಶ್ಯಕತೆ ಇದೆ. ಹಾಗಾಗಿ ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳ ಬೇಕು. ಈಗ ಆಗಿ ಹೋಗಿರುವುದರ ಕುರಿತು ಚಿಂತೆ ಮಾಡುವ ಬದಲು ಆಗಿರುವ ಅನಾಹುತಕ್ಕೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಉತ್ತಮ ಜೀವನಕ್ಕೆ ನಮ್ಮ ಪೂರ್ವಜರ ವೈಜ್ಞಾನಿಕ ಬದುಕು ಉತ್ತಮವೋ ಅಥವಾ ಆಧುನಿಕ ವಿಜ್ಞಾನ ಉತ್ತಮವೋ?
ವಿಜ್ಞಾನ ನಿರಂತರವಾಗಿ ಹೊಸ ವಿಚಾರಗಳನ್ನು ಅರಿತುಕೊಳ್ಳುತ್ತಾ ಹೋಗುತ್ತದೆ. ನಮ್ಮ ಪೂರ್ವಜರು ಈ ಹಿಂದೆ ಮಾಡಿದ ಎಲ್ಲ ಕೆಲಸ ಗಳು ಈ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆಯೇ ಎಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು. ವಿಶ್ವದ ಜನಸಂಖ್ಯೆ ಏಳೂವರೆ ಬಿಲಿಯನ್‌ನಷ್ಟು ಇದೆ. ಈ ಜನಸಂಖ್ಯೆಗೆ ಬೇಕಾದಷ್ಟು ಆಹಾರ, ಔಷಧವನ್ನು ಹಳೆಯ ವ್ಯವಸ್ಥೆಯಲ್ಲಿ ಪೂರೈಸಲು ಸಾಧ್ಯವೇ ಎಂಬುದು ಬಹಳ ಮುಖ್ಯ. ಉದಾಹರಣೆಗೆ ನಮ್ಮ ಪೂರ್ವಜರು ಬಳಸುತ್ತಿದ್ದ ಆಯುರ್ವೇದ ಔಷಧವನ್ನು ಕೋಟ್ಯಾಂತರ ಜನರಿಗೆ ಪೂರೈಕೆ ಮಾಡಲು ಸಾಧ್ಯವೇ? ಹಾಗಾಂತ ಆಯುರ್ವೇದ, ಪ್ರಾಚೀನರು ಅನುಸರಿಸುತ್ತಿದ್ದ ಪದ್ಧತಿಗಳು ಪರಿಣಾಮಕಾರಿಯಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಎಷ್ಟು ಜನರಿಗೆ ತುರ್ತಾಗಿ ಸೌಲಭ್ಯ ತಲುಪಿಸಬಹುದು ಎಂಬುದು ಮುಖ್ಯ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ವಿಜ್ಞಾನ, ತಂತ್ರಜ್ಞಾನದ ಅವಶ್ಯಕತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net