ಪರಾರಿಯಾಗಿರುವ ಬಾಲಕರಿಗಾಗಿ ಮುಂದುವರಿದ ಶೋಧ

Crime Logo
Published on

ಬೆಂಗಳೂರು: ಸರ್ಕಾರಿ ಬಾಲಮಂದಿರದಿಂದ ಪರಾರಿಯಾಗಿರುವ ಅಸ್ಸಾಂ ಮೂಲದ ನಾಲ್ವರು ಬಾಲಕರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆ ಸಮೀಪದ ಡಾ.ಎಂ.ಎಚ್.ಮರೀಗೌಡ ರಸ್ತೆಯ ಸರ್ಕಾರಿ ಬಾಲಮಂದಿರದಲ್ಲಿ ನ.೧೭ರಂದು ಈ ಘಟನೆ ನಡೆದಿತ್ತು. ಈ ಸಂಬಂಧ ಬಾಲಮಂದಿರದ ಸೂಪರಿಂಟೆಂಡೆಂಟ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕರ ಪತ್ತೆಗೆ ಶೋಧಿಸುತ್ತಿದ್ದಾರೆ.
ಇತ್ತೀಚೆಗೆ ಮೆಜೆಸ್ಟಿಕ್ ಪ್ರದೇಶದ ಅಂಗಡಿ-ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ೧೪ ವರ್ಷದ ಇಬ್ಬರು ಹಾಗೂ ೧೬ ವರ್ಷದ ಇಬ್ಬರು ಸೇರಿ ನಾಲ್ವರು ಬಾಲಕರನ್ನು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿದ್ದರು. ಸಮಿತಿ ಆದೇಶದನ್ವಯ ನಾಲ್ವರು ಆ ಬಾಲಕರಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು.
ಈ ಬಾಲಕರು ಉಳಿದುಕೊಂಡಿದ್ದ ಬಾಲಮಂದಿರ ಕೊಠಡಿಗೆ ಹೊಂದಿಕೊಂಡಂತೆ ಡೈನಿಂಗ್ ಹಾಲ್ ಇದೆ. ನ.೧೭ರಂದು ಆ ಡೈನಿಂಗ್ ಹಾಲ್‌ಗೆ ಬಂದಿರುವ ಬಾಲಕರು ಕಿಟಕಿ ಸರಳು ಮುರಿದು ಹೊರಗೆ ಬಂದು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ನ.೧೮ರಂದು ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದ ನಂತರ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕರಿಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದು, ಈ ಸಂಬಂಧ ಅಸ್ಸಾಂ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net