ಮುಡಾದಲ್ಲಿ ಲೋಕಾಯುಕ್ತರಿಂದ ಶೋಧ ಕಾರ್ಯ

muda scam
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಶನಿವಾರದಿಂದ ಮುಡಾದಲ್ಲಿ ತನಿಖೆ ಪ್ರಾರಂಭಿಸಿದ್ದು, ಹಗರಣಕ್ಕೆ ಸಂಬಂಧಿಸಿದ ಕಡತಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಅ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದಾದ ನಂತರ ಕೆಸರೆಯಲ್ಲಿ ಅ.1 ರಂದು ಪಾರ್ವತಿ ಅವರು ಹೊಂದಿದ್ದ 3.16 ಎಕರೆ ಜಮೀನಿನಲ್ಲಿ ಮಹಜರು ನಡೆಸಿದ್ದರು. ಅ.4 ರಂದು ಕೆಸರೆ ಜಾಗಕ್ಕೆ ಪರ್ಯಾಯವಾಗಿ ಪಾರ್ವತಿ ಅವರು ವಿಜಯನಗರ ಮೂರನೇ ಹಂತದಲ್ಲಿ ಪಡೆದುಕೊಂಡಿರುವ 14 ನಿವೇಶನಗಳ ಮಹಜರು ನಡೆಸಿದರು. ಮಹಜರು ಪ್ರಕ್ರಿಯೆ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರ ಪೂರ್ಣಗೊಳಿಸಿದ ನಂತರ ಲೋಕಾಯುಕ್ತ ಅಧಿಕಾರಿಗಳು ಇದೀಗ ಮುಡಾದಲ್ಲಿ ತನಿಖೆ ಪ್ರಾರಂಭಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದ ಸಂಪೂರ್ಣ ಕಡತ ನೀಡುವಂತೆ ವಾರದ ಹಿಂದೆಯೇ ಲೋಕಾಯುಕ್ತ ಅಧಿಕಾರಿಗಳು ಮುಡಾಗೆ ನಿರ್ದೇ ಶನ ನೀಡಿದ್ದರು. ಈ ಮೇರೆಗೆ ಮುಡಾ ಅಧಿಕಾರಿಗಳು ಕಡತವನ್ನು ಸಿದ್ಧಪಡಿಸಿ ಲೋಕಾಯುಕ್ತ ಅಧಿಕಾರಿಗಳಿಗೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಬೆಳಗ್ಗಿನಿಂದಲೇ ಮುಡಾದಲ್ಲಿ ಹಗರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಮುಡಾ ಅಧಿಕಾರಿಗಳು ನೀಡಿರುವ ದಾಖಲೆಗಳ ಜತೆಗೆ ತನಿಖೆಗೆ ಪೂರಕವಾದ ವಿವಿಧ ದಾಖಲೆಗಳಿಗಾಗಿ ಲೋಕಾಯುಕ್ತ ಅಧಿಕಾರಿ ಗಳು ಶೋಧ ನಡೆಸಿದರು. ಮುಡಾ ಆಯುಕ್ತರ ಕಚೇರಿ, ಲೆಕ್ಕಪತ್ರ ವಿಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾ ಗಿದೆ. ಈ ಸಂದರ್ಭ ದೂರುದಾರ ಸ್ನೇಹಮಯಿ ಕೃಷ್ಣ ಸಹ ಮುಡಾಗೆ ಭೇಟಿ ನೀಡಿದರು. ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ ಮೇಲೆ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.

ಸದ್ಯದಲ್ಲೇ ಆರೋಪಿಗಳಿಗೆ ನೋಟಿಸ್?: ಮುಡಾ ದಾಖಲೆ ಪರಿಶೀಲನೆಯ ನಂತರ ಪ್ರಕರಣದ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರ ಅನುಮತಿಯ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ರಕರಣದ ಇನ್ನುಳಿದ ಆರೋಪಿಗಳ ವಿಚಾರಣೆಯನ್ನು ಮೊದಲ ಹಂತದಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಇದಕೋಸ್ಕರ ಲೋಕಾಯುಕ್ತ ಅಧಿಕಾರಿಗಳು ಸದ್ಯದಲ್ಲಿಯೇ ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net