ಅನಧಿಕೃತ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿರಿ: ಪೂರ್ವ ವಲಯದ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ

commsr meet
Published on

ಬೆಂಗಳೂರು: ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ಮುಲಾಜಿಲ್ಲದೆ ಬೀಗ ಮುದ್ರೆ ಹಾಕುವಂತೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಪೂರ್ವ ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೂರ್ವ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ನಾಗರಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಸಾರ್ವಜನಿಕರೊಬ್ಬರು ಅನಧಿಕೃತ ಕಟ್ಟಡಗಳ ನಿರ್ಮಾಣದ ವಿಷಯ ಪ್ರಸ್ತಾಪಿಸಿ ಅವುಗಳ ಮೇಲೆ ಕಾನೂನು ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ನಗರದಲ್ಲಿ ಎಲ್ಲೇ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದರೂ ಅವುಗಳ ವಿರುದ್ಧ ಪಾಲಿಕೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತದೆ. ನಕ್ಷೆ ಮಂಜೂರಾತಿ ಉಲ್ಲಂಘಿಸಿರುವ/ಅನಧಿಕೃತ ಕಟ್ಟಡಗಳನ್ನು ಗುರುತಿಸಿ, ಮೇಲ್ಮನವಿ ಪ್ರಾಧಿಕಾರದಿಂದ ಪ್ರಕರಣ ವಜಾಗೊಳಿಸಿರುವ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಬೇಕು. ಅನಂತರ ಅಂತಹ ಕಟ್ಟಡಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಬೆಸ್ಕಾಂಗೆ ಪತ್ರ ಬರೆಯಬೇಕು ಎಂದು ನಿರ್ದೇಶಿಸಿದರು.

50 ದೂರುಗಳ ಸ್ವೀಕಾರ:

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಸುಮಾರು 50 ದೂರುಗಳನ್ನು ಸ್ವೀಕರಿಸಿದ್ದು, ಕೆಲವನ್ನು ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ಉಳಿದವುಗಳನ್ನು ಕಾಲಮಿತಿಯೊಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಈ ವೇಳೆ ವಲಯ ಆಯುಕ್ತೆ ಸ್ನೇಹಲ್, ಜಂಟಿ ಆಯುಕ್ತೆ ಸರೋಜಾ, ಉಪ ಆಯುಕ್ತ ರಾಜು, ಮುಖ್ಯ ಅಭಿಯಂತರ ಸುಗುಣಾ ಹಾಗೂ ಇತರ ಅಧಿಕಾರಿಗಳು ಇದ್ದರು.

ಅಹವಾಲು ವೇಳೆ ಕೇಳಿಬಂದ ಪ್ರಮುಖ ಸಮಸ್ಯೆಗಳಿವು:

* ಗರುಡ ಮಾಲ್ ಬಳಿ ಪಾಲಿಕೆ ಜಾಗದಲ್ಲಿ ಅನಧಿಕೃತ ಪಾರ್ಕಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹ.

* ಶಾಂತಿನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮನವಿ.

* ಹೆಬ್ಬಾಳದ ಆನಂದನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸಲಹೆ.

* ನಂದಿದುರ್ಗ ಎಕ್ಸಟೆನ್ಷನ್‌ನಲ್ಲಿ ಕಟ್ಟಡ ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ಹಾಕಿದ ಬೀಗಮುದ್ರೆ ತೆರವುಗೊಳಿಸಿ, ಕಟ್ಟಡ ನಿರ್ಮಾಣದ ಬಗ್ಗೆ ಕ್ರಮ.

* ಕಲ್ಲಹಳ್ಳಿ ಚಿತಾಗಾರದ ಆವರಣದಲ್ಲಿ ಅನಧಿಕೃತವಾಗಿ ಕಟ್ಟಡ ಅವಶೇಷ ಸುರಿಯುತ್ತಿರುವುದಕ್ಕೆ ತಡೆಯೊಡ್ಡುವುದು.

* ಭುವನಗಿರಿ ಉದ್ಯಾನವನದಲ್ಲಿ ಬೀದಿದೀಪ ಅಳವಡಿಕೆ ಹಾಗು ಕಸ ಸಂಗ್ರಹಣೆಗೆ ಆಟೋಗಳ ವ್ಯವಸ್ಥೆ ಕೋರಿ.

* ಕೋಲ್ಸ್ ಪಾರ್ಕ್ ಉದ್ಯಾನದಲ್ಲಿ ಮಕ್ಕಳ ಆಟದ ಸಲಕರಣೆಗಳು ಸುಸ್ಥಿತಿಯಲ್ಲಿಡಲು ಮನವಿ.

* ಗೋವಿಂದಪುರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಅಂಗಡಿಗಳ ತೆರವುಗೊಳಿಸಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net