

ಪಡುಬಿದ್ರಿ: ಹೆಜಮಾಡಿ ಏಳೂರು ಮೊಗವೀರ ಮಹಾಸಭಾದ ವತಿಯಿಂದ ಹೆಜಮಾಡಿಯಲ್ಲಿ ಶನಿವಾರ ಸಮುದ್ರಕ್ಕೆ ಹಾಲೆರೆದು ಪೂಜೆ ಸಲ್ಲಿಸಲಾಯಿತು.
ಹೆಜಮಾಡಿ ಶ್ರೀ ವೀರ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಏಳೂರು ಮೊಗವೀರ ಮಹಾಸಭಾದ ನಾನಾ ಗ್ರಾಮಸಭೆಗಳ ಸದಸ್ಯರು ಭಜನಾ ಮೆರವಣಿಗೆ ಮೂಲಕ ಸಮುದ್ರ ತೀರಕ್ಕೆ ಬಂದು ಸಾಮೂಹಿಕ ಪೂಜೆ ಸಲ್ಲಿಸಿ ಮತ್ಸ್ಯ ಸಮೃದ್ಧಿ, ಮೀನುಗಾರಿಕೆ ಸಂದರ್ಭ ಯಾವುದೇ ಸಮಸ್ಯೆ ಉಂಟಾಗದಂತೆ ಪ್ರಾರ್ಥನೆ ಸಲ್ಲಿಸಿ ಸಮುದ್ರಕ್ಕೆ ಹಾಲು, ಪುಷ್ಪ, ತೆಂಗಿನಕಾಯಿ ಸಮರ್ಪಿಸಿದರು.
ಹೆಜಮಾಡಿ ಏಳೂರು ಮೊಗವೀರ ಮಹಸಭಾದ ಅಧ್ಯಕ್ಷ ದಿವಾಕರ ಹೆಜಮಾಡಿ, ಉಪಾಧ್ಯಕ್ಷ ಬಾಲಕೃಷ್ಣ ಸುವರ್ಣ, ಕಾರ್ಯದರ್ಶಿ ಲಲಿತ್‌ಕುಮಾರ್, ಕೋಶಾಧಿಕಾರಿ ಶ್ರೇಯಸ್ ಸಾಲ್ಯಾನ್, ಹದಿನಾರುಪಟ್ಣ ಮೊಗವೀರ ಸಭಾದ ಅಧ್ಯಕ್ಷ ಎಚ್.ರವಿ ಕುಂದರ್, ಕಾರ್ಯದರ್ಶಿ ಸುಧಾಕರ ಕರ್ಕೇರ, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಹಿರಿಯರಾದ ನಾರಾಯಣ ಮೆಂಡನ್, ಕನ್ನಂಗಾರು ಮೊಗವೀರ ಸಭಾದ ಅಧ್ಯಕ್ಷ ಕುಮಾರ್ ಕುಂದರ್, ಏಳೂರು ಗ್ರಾಮಸಭೆಗಳ ಅಧ್ಯಕ್ಷರು, ಗುರಿಕಾರರು, ಮಹಿಳಾ ಸಭೆಗಳ ಪದಾಧಿಕಾರಿಗಳು, ಗ್ರಾಮವ್ಯಾಪ್ತಿಯ ಮೀನುಗಾರರು ಭಾಗವಹಿಸಿದ್ದರು.