ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಣೆ: ಎಂಆರ್​ಪಿಎಲ್ ಸ್ಥಾಪಿಸಿರುವ 637 ಕೋಟಿ ರೂ. ವೆಚ್ಚದ ಘಟಕ ಕಾರ್ಯಾರಂಭ

MRPL
Published on

| ವೇಣುವಿನೋದ್ ಕೆ.ಎಸ್. ಮಂಗಳೂರು

ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಸ್ಥಾವರ ಮಂಗಳೂರಿನಲ್ಲಿ ಕಾರ್ಯಾರಂಭಗೊಂಡಿದೆ ಎಂಆರ್​ಪಿಎಲ್ ಕಂಪನಿ 637 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಈ ಬೃಹತ್ ಘಟಕದ ಮೂಲಕ ಈಗಾಗಲೆ ಎಂಆರ್​ಪಿಎಲ್​ಗೆ ನಿತ್ಯ 30 ಎಂಎಲ್​ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಪೈಪ್​ಲೈನ್ ಮೂಲಕ ಪೂರೈಸಲಾಗುತ್ತಿದೆ. ಘಟಕದ ಅಂತಿಮ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಉದ್ಘಾಟನೆಗೆ ಪ್ರಧಾನಿ ಅಥವಾ ಕೇಂದ್ರ ಸಚಿವರನ್ನು ಆಹ್ವಾನಿಸುವ ಕುರಿತು ಯೋಜಿಸಲಾಗುತ್ತಿದೆ. ರಿವರ್ಸ್ ಓಸ್ಮೋ ಸಿಸ್ ತಂತ್ರಜ್ಞಾನದ 70 ಎಂಎಲ್​ಡಿ ಸಾಮರ್ಥ್ಯದ ಈ ಘಟಕದಲ್ಲಿ ಸದ್ಯ 30 ಎಂಎಲ್​ಡಿ ನೀರು ಸಂಸ್ಕರಿಸುವ ಯಂತ್ರೋಪಕರಣ ಅಳವಡಿಸಲಾಗಿದೆ, ಮುಂದಿನ ಹಂತದಲ್ಲಿ ಪೂರ್ಣ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಲಾಗುವುದು.

ನೀರಿನ ಅಭಾವದಿಂದ ಯೋಜನೆಗೆ ಒತ್ತು: ಮಂಗಳೂರಿನಲ್ಲಿ ಕೆಲವರ್ಷ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದ್ದು, ಆ ಅವಧಿಯಲ್ಲಿ ಎಂಆರ್​ಪಿಎಲ್ ಸೇರಿ ವಿವಿಧ ಕಂಪನಿಗಳು, ವಾಣಿಜ್ಯ ಚಟುವಟಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. 2019ರಲ್ಲಂತೂ ಕಂಪನಿ 45 ದಿನ ಕಾಲ ಷಟ್​ಡೌನ್​ಗೆ ಹೋಗಿದ್ದರಿಂದ ನೂರಾರು ಕೋಟಿ ರೂ. ನಷ್ಟ ಆಗಿತ್ತು. ಹಾಗಾಗಿ ಮಂಗಳೂರಿನಲ್ಲಿರುವ ಸಮುದ್ರ ನೀರನ್ನೇ ಸಂಸ್ಕರಿಸಿ ಬಳಸಿಕೊಳ್ಳಲು ಕಂಪನಿಯ ಆಡಳಿತ ಮಂಡಳಿ ತೀರ್ವನಿಸಿತ್ತು. ಅದೇ ವರ್ಷ ಕಾಮಗಾರಿ ಆರಂಭಿಸಿದ್ದು 2021ರ ಡಿಸೆಂಬರ್​ಗೆ ಯೋಜನೆಯ ಮೆಕಾನಿಕಲ್ ಕೆಲಸಗಳು ಪೂರ್ಣಗೊಂಡವು. ಜನವರಿಯಿಂದಲೇ ಎಂಆರ್​ಪಿಎಲ್​ಗೆ ಸಮುದ್ರ ನೀರನ್ನು ಸಂಸ್ಕರಿಸಿ ಪೂರೈಸಲಾಗುತ್ತಿದೆ.

3 ಹಂತದಲ್ಲಿ ಸಂಸ್ಕರಣೆ: ಈ ಬೃಹತ್ ಸ್ಥಾವರ ಮೂರು ಹಂತಗಳಲ್ಲಿ ಕಾರ್ಯವೆ ಸಾಗುತ್ತದೆ. ಸಮುದ್ರಕ್ಕೆ 1 ಕಿ.ಮೀ. ದೂರದ ವರೆಗೆ 1.6 ಮೀಟರ್ ವ್ಯಾಸದ ಪೈಪ್​ಲೈನ್ ಹಾಕಿ ನೀರು ಪಂಪ್ ಮಾಡಲಾಗುತ್ತದೆ.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡೆದು ಈಗಾಗಲೆ ಸ್ಥಾವರವನ್ನು ಕಾರ್ಯಾರಂಭಗೊಳಿಸಲಾಗಿದೆ. ಪ್ರತಿದಿನ 30 ಎಂಎಲ್​ಡಿ ನೀರು ಪಂಪಿಂಗ್ ಆಗುತ್ತಿದೆ. ಎಂಆರ್​ಪಿಎಲ್​ನ ನೀರಿನ ಬೇಡಿಕೆಯ ಅಂಶವನ್ನು ಪೂರೈಸಲಿದೆ. | ಕಿರಣ್ ಬಿ ಜನರಲ್ ಮ್ಯಾನೇಜರ್(ಪ್ರಾಜೆಕ್ಟ್ಸ್), ಎಂಆರ್​ಪಿಎಲ್

ಷಟ್​ಡೌನ್ ಮಾಡಂಗಿಲ್ಲ: ನವ ಮಂಗಳೂರು ಬಂದರು ಪ್ರಾಧಿಕಾರ ಲೀಸ್​ಗೆ ನೀಡಿರುವ ಜಮೀನಿನಲ್ಲಿ ಮಂಗಳೂರು ಹೊರವಲಯದ ತಣ್ಣೀರುಬಾವಿಯಲ್ಲಿ ಈ ಸ್ಥಾವರ ಇದೆ. ವಿಎ ಟೆಕ್ ವೆಬಾಗ್ ಕಂಪನಿ ಸ್ಥಾವರ ನಿರ್ವಿುಸಿದೆ. ಮುಂದಿನ 10 ವರ್ಷಗಳಿಗೆ ನಿರ್ವಹಣೆ ಹೊಣೆಯೂ ಕಂಪನಿಯದ್ದು. ಈ ಸ್ಥಾವರವನ್ನು ಮಧ್ಯೆ ನಿಲ್ಲಿಸುವಂತಿಲ್ಲ, ನಿರಂತರವಾಗಿ ಚಾಲನೆಯಲ್ಲಿ ಇರಲೇಬೇಕಾಗುತ್ತದೆ.

ಕುಡಿಯಲು ಯೋಗ್ಯವಲ್ಲ: ನೀರು ಸಂಸ್ಕರಣೆಗೊಂಡರೂ ಕುಡಿಯಲಾಗದು. ನೀರಿನಲ್ಲಿರುವ ಎಲ್ಲ ಖನಿಜಾಂಶಗಳೂ ಸಂಸ್ಕರಣೆ ವೇಳೆ ಇಲ್ಲವಾಗುವುದರಿಂದ ಕುಡಿಯಲು ಯೋಗ್ಯವಲ್ಲ. ತಮಿಳುನಾಡಿನಲ್ಲಿ ಕುಡಿಯುವ ನೀರಿನ ಗ್ರೇಡ್​ವರೆಗೆ ಪರಿವರ್ತಿಸಬಲ್ಲ ರಿವರ್ಸ್ ಓಸ್ಮೋಸಿಸ್ ಘಟಕಗಳಿವೆ. ಆದರೆ ಇಲ್ಲಿ ನಮ್ಮದು ಕೈಗಾರಿಕೆ ಬಳಕೆಗೆ ಮಾತ್ರ ಬಳಕೆಯಾಗುತ್ತದೆ. ಈ ಸ್ಥಾವರಕ್ಕೆ ಇನ್ನೂ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ರಿ-ಮಿನರಲೈಸೇಶನ್ ಘಟಕ ಸೇರ್ಪಡೆ ಮಾಡಿದರೆ ಆಗ ಅದರಿಂದ ಸಿಗುವ ನೀರು ಸೇವನೆಗೆ ಯೋಗ್ಯ ಎಂದು ಹೇಳುತ್ತಾರೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net