

ಕಾಸರಗೋಡು: ಮಂಗಲ್ಪಾಡಿ ಪಂಚಾಯಿತಿಯ ಉಪ್ಪಳ ಮುಸೋಡಿಯಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು, ಒಂದು ಮನೆ ಹಾಗೂ ಹಲವು ತೆಂಗಿನಮರಗಳು ಸಮುದ್ರಪಾಲಾಗಿವೆ.
ಕೂಲಿ ಕಾರ್ಮಿಕ ಮೂಸ ಎಂಬುವರ ಮನೆ ಈಗಾಗಲೇ ಕಡಲಗರ್ಭ ಸೇರಿಕೊಂಡಿದೆ. ಆಸಿಯಮ್ಮ, ತಾಹಿರ, ಆಲಿಕುಞಿ, ಮಹಮ್ಮದ್, ಇಸ್ಮಾಯಿಲ್ ಎಂಬುವರ ಮನೆಗಳೂ ಅಪಾಯದಲ್ಲಿವೆ. ಕಂದಾಯ ಅಧಿಕಾರಿಗಳು ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಪಾಯದಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ನೋಟಿಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಇವರೆಲ್ಲರೂ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಕೈರುನ್ನೀಸಾ, ಸಫಿಯಾ, ಕಮಲಾ, ಜಾನು, ನಫೀಸಾ ಎಂಬುವರ ತೆಂಗಿನಮರಗಳೂ ಸಮುದ್ರಪಾಲಾಗಿವೆ. ಶಾರದಾನಗರ, ಮಣಿಮುಂಡ, ಶಿವಾಜಿನಗರ ಪ್ರದೇಶದ ನಿವಾಸಿಗಳು ಆತಂಕದಿಂದ ಜೀವನ ನಡೆಸುವಂತಾಗಿದೆ. ಈ ಪ್ರದೇಶದಲ್ಲಿ ಸುಸಜ್ಜಿತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.