

ಕಾರವಾರ: ಸಮುದ್ರದ ಅಬ್ಬರಕ್ಕೆ ಹಾರವಾಡದ ಜನ ಬೆಚ್ಚಿದ್ದಾರೆ. ಬುಧವಾರ ಹಾಗೂ ಗುರುವಾರ ಇದ್ದಕ್ಕಿದ್ದಂತೆ ಸಮುದ್ರ ರೌದ್ರಾವತಾರ ತಾಳಿದ್ದು, ಅಬ್ಬರದ ಅಲೆಗಳು ತರಂಗ ಮೇಟ್‌ನಲ್ಲಿ ಎರಡು ಮನೆಗಳನ್ನು ಆಪೋಶನ ಪಡೆದಿವೆ. ಸಾಗರವು ಇನ್ನಷ್ಟು ಮುಂದಡಿ ಇಡುತ್ತಿದ್ದು, ಇನ್ನೂ ಸುಮಾರು 200 ಕುಟುಂಬಗಳು ಮನೆ ಕಳೆದುಕೊಳ್ಳುವ ಭೀತಿಯಲ್ಲಿವೆ. ಹಾಗಾಗಿ ಗ್ರಾಮಸ್ಥರು ಶುಕ್ರವಾರ ಕಾರವಾರಕ್ಕೆ ಧಾವಿಸಿದ್ದು, ಸಮುದ್ರ ಕೊರೆತ ತಡೆಗೆ ಶೀಗ್ರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಮಾಡಿದರು.
ಗ್ರಾಮದ ತರಂಗ ಮೇಟ್ ತೀರದ ಪಕ್ಕದಲ್ಲಿ ಖಾಸಗಿ ಜಾಗಗಳಿವೆ. ಎಲ್ಲರೂ ಮೂರು, ನಾಲ್ಕು ಗುಂಟೆ ಜಾಗ ಹೊಂದಿದ್ದಾರೆ. ಆದರೆ, ಸಮುದ್ರ ಕೊರೆತದಿಂದ ಬಹುತೇಕ ಜನರ ಜಮೀನು ಮುಕ್ಕಾಲುಪಾಲು ಕೊಚ್ಚಿ ಹೋಗಿದೆ. ಇನ್ನೂ ಸಮುದ್ರ ಕೊರೆತ ಮುಂದುವರಿದರೆ, ಗ್ರಾಮದ ರಸ್ತೆಗೆ ಹಾನಿಯಾಗಲಿದೆ. ಗ್ರಾಮ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳಲಿದೆ. ಗ್ರಾಮದ ರಸ್ತೆಯ ಆಚೆ ತಗ್ಗು ಪ್ರದೇಶವಿದ್ದು, ಅಲ್ಲಿ ಸುಮಾರು 200 ಮನೆಗಳಿವೆ. ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಹಾಗೇ ಬಿಟ್ಟರೆ ಇದೇ ತಿಂಗಳಲ್ಲಿ ಸಮುದ್ರವು ಇಡೀ ಊರನ್ನು ನುಂಗಿಬಿಡುವ ಆತಂಕವಿದೆ. ಎಲ್ಲರೂ ಬಡವರು ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿರುವವರು ನಮ್ಮ ಊರು ಉಳಿಸಿ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಅವರ ಬಳಿ ಮನವಿ ಮಾಡಿಕೊಂಡರು.
ನಮ್ಮ ಊರಿನಲ್ಲಿ ಸಮುದ್ರ ಕೊರೆತದ ಸಮಸ್ಯೆ ಯಾವಾಗಿನಿಂದ ಇದೆ. ಹಲವು ಬಾರಿ ನಾವು ಮನವಿ ಮಾಡಿದ್ದೇವೆ. ಈ ಮಳೆಗಾಲ ಪ್ರಾರಂಭದ ಹೊತ್ತಿಗೆ ಗ್ರಾಪಂನಲ್ಲಿ ಠರಾವು ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶಾಸಕರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಶಿರೂರು ಗುಡ್ಡ ಕುಸಿತ ಪ್ರದೇಶ ವೀಕ್ಷಿಸಲು ಬಂದ ಸಿಎಂ ಸಿದ್ದರಾಮಯ್ಯ ಅವರು ತರಂಗ ಮೇಟ್ ತೀರಕ್ಕೂ ಭೇಟಿ ಕೊಟ್ಟು ಪರಿಸ್ಥಿತಿಯನ್ನು ವೀಕ್ಷಿಸಿದರು. ಸಮುದ್ರ ಕೊರೆತ ತಡೆಗೆ ಪ್ರಸ್ತಾವನೆ ಸಿದ್ಧ ಮಾಡುವಂತೆ ಸೂಚಿಸಿದರು. ಸ್ವತಃ ಸಿಎಂ ಬಂದಿದ್ದರಿಂದ ನಮ್ಮ ಸಮಸ್ಯೆ ಬಗೆಹರಿಯಬಹುದು ಎಂದು ನಾವು ವಿಶ್ವಾಸದಲ್ಲಿದ್ದೆವು. ಆದರೆ, ಏನೂ ಪ್ರಯೋಜನವಾಗಿಲ್ಲ ಬಂದರು ಇಲಾಖೆಯವರು ಬಂದು ಒಂದಷ್ಟು ಮರಳಿನ ಚೀಲಗಳನ್ನು ಹಾಕಿ ಹೋದರು. ಬಿಟ್ಟರೆ ಬೇರೇನೂ ಮಾಡಿಲ್ಲ. ಗುರುವಾರ ಅಶೋಕ ಹರಿಕಂತ್ರ ಹಾಗೂ ಗಣಪತಿ ದುರ್ಗೇಕರ್ ಎಂಬುವವರ ಮನೆಗಳು ಬಿದ್ದು ಹೋಗಿವೆ. ಇಡೀ ಊರಿಗೆ ಹಾನಿಯಾಗುವ ಮೊದಲು ಸರ್ಕಾರ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ನಮ್ಮ ಊರಿನ ಸಮಸ್ಯೆ ಬಗ್ಗೆ ನಾವು ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿ ಸೋತಿದ್ದೇವೆ. ಸ್ವತಃ ಸಿಎಂ ಊರಿಗೆ ಬಂದಿದ್ದರಿಂದ ಕ್ರಮವಾಗಬಹುದು ಎಂದು ನಾವು ನಂಬಿದ್ದೆವು. ಆದರೆ, ಏನೂ ಆಗಿಲ್ಲ. ಈಗ ಎರಡು ಮನೆಗಳು ಬಿದ್ದು ಹೋಗಿವೆ. ಇನ್ನಾದರೂ ಏಳು ದಿನದಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ.ಸಂತೋಷ ದುರ್ಗೇಕರ್‌ಹಾರವಾಡ ಗ್ರಾಪಂ ಉಪಾಧ್ಯಕ್ಷ ಶಿರೂರು ಗುಡ್ಡ ಕುಸಿತದಲ್ಲಿ ಮೃತರಿಗೆ ಪಿಎಂ ನಿಧಿಯಿಂದ ವಿಶೇಷ ಪರಿಹಾರ (vijayavani.net)https://www.vijayavani.net/shirur-land-slide-pm-modi-letter