ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭ : ಕಡಲ ಕಿನಾರೆ ನಿವಾಸಿಗರಲ್ಲಿ ಆತಂಕ : ರಸ್ತೆಗೆ ಬಡಿಯುತ್ತಿರುವ ಸಮುದ್ರದ ಅಲೆಗಳು

rain 2
ಬೋಳಿಯಾರ್ ಜಾರದಗುಡ್ಡ ಎಂಬಲ್ಲಿ ಗುಡ್ಡ ಕುಸಿಯುತ್ತಿರುವುದು.
Published on

ಉಳ್ಳಾಲ: ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಎರಡು ದಿನಗಳಿಂದ ಬೀಸುತ್ತಿರುವ ಗಾಳಿಯ ಪರಿಣಾಮ ಕಡಲ್ಕೊರೆತ ಆರಂಭಗೊಂಡಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕಡಲ ಕಿನಾರೆ ನಿವಾಸಿಗರಲ್ಲಿ ಆತಂಕ ಶುರುವಾಗಿದೆ.

ಪ್ರತಿ ಮಳೆಗಾಲದಲ್ಲೂ ಉಳ್ಳಾಲದ ಸೀಗ್ರೌಂಡ್ ಮತ್ತು ಸೋಮೇಶ್ವರದ ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದೆ. ಹಿಂದಿನ ವರ್ಷ ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡು ಬೀಚ್ ರಸ್ತೆ ಸಮುದ್ರ ಪಾಲಾಗಿತ್ತು. ಕೆಲವು ಮನೆಗಳು ಮತ್ತು ಗೆಸ್ಟ್ ಹೌಸ್‌ಗಳು ಅಪಾಯದಂಚಿನಲ್ಲಿದ್ದವು. ಬಟ್ಟಂಪಾಡಿ ಸಮುದ್ರ ಕಿನಾರೆಯಲ್ಲಿದ್ದ ಗೆಸ್ಟ್ ಹೌಸ್ ಭಾಗಶಃ ಸಮುದ್ರ ಸೇರಿತ್ತು.

ಇದೀಗ ಕೈಕೋ, ಮುಕಚ್ಚೇರಿ, ಸೀಗ್ರೌಂಡ್, ಮೊಗವೀರಪಟ್ಣ, ಸೋಮೇಶ್ವರದ ಬಟ್ಟಪ್ಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭಗೊಂಡಿದೆ. ಮೊಗವೀರ ಪಟ್ಣದಲ್ಲಿ ಸುಮಿತ್ ಎಂಬುವರ ಮನೆಗೆ ಹಾನಿಯಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಯೋಗೀಶ್ ಎಂಬುವರ ಮನೆ ಅಪಾಯದಲ್ಲಿದ್ದು, ಸಮುದ್ರದ ಅಲೆಗಳು ರಸ್ತೆಯ ಸಮೀಪಕ್ಕೆ ಬಡಿಯುತ್ತಿದ್ದು ಕೇವಲ ಹತ್ತು ಅಡಿಯಷ್ಟೇ ಬಾಕಿಯಿದೆ.

 ಇನೋಳಿಯಲ್ಲಿ ಗುಡ್ಡ ಕುಸಿತ ಭೀತಿ: ಪಾವೂರು ಗ್ರಾಮದ ಇನೋಳಿಯಲ್ಲಿ ಗುಡ್ಡ ಕುಸಿತ ಆರಂಭಗೊಂಡಿದ್ದು ಕೆಳಭಾಗದಲ್ಲಿರುವ ನಿವಾಸಿಗರಲ್ಲಿ ಆತಂಕ ಸೃಷ್ಟಿಸಿದೆ. ವಿದ್ಯುತ್ ಕಂಬ ಮತ್ತು ಮರಗಳು ಉರುಳಿ ಬಿದ್ದಿದ್ದು ಸ್ಥಳೀಯರು ಶ್ರಮದಾನದ ಮೂಲಕ ಮರ ತೆರವುಗೊಳಿಸಿದರು. ಬೋಳಿಯಾರ್ ಗ್ರಾಮದ ಜಾರದಗುಡ್ಡ ಎಂಬಲ್ಲಿ ಗುಡ್ಡ ಕುಸಿಯತೊಡಗಿದೆ. ಇದರ ಪರಿಣಾಮ ಮೊಹಮ್ಮದ್ ರಫೀಕ್ ಮತ್ತು ಪಾರಿಸ್ ಎಂಬುವರ ಮನೆಗೆ ಅಪಾಯ ಎದುರಾಗಿದ್ದು, ಮನೆಮಂದಿ ಆತಂಕಕ್ಕೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net