

ಗಂಗೊಳ್ಳಿ: ಮರವಂತೆಯ ಕರಾವಳಿ ತೀರದಲ್ಲಿ ಮತ್ತೆ ಕಡಲ್ಕೊರೆತ ಭೀತಿ ಶುರುವಾಗಿದೆ. ಪ್ರತಿ ವರ್ಷ ಇದೇ ಆತಂಕ, ಭೀತಿ ಇದ್ದದ್ದೆ. ಕಡಲ್ಕೊರೆತ ಶುರುವಾದಾಗಲೆಲ್ಲ ಇಲ್ಲಿಗೆ ಭೇಟಿ ನೀಡಿ ಹೋದ ಜನಪ್ರತಿನಿಧಿಗಳು, ಅಧಿಕಾರಿಗಳು ಕೊಟ್ಟ ಭರವಸೆ ಮಾತ್ರ ಈಗಲೂ ಭರವಸೆಯಾಗಿಯೇ ಉಳಿದಿವೇ ಅನ್ನುವುದು ಸತ್ಯ.
ಮರವಂತೆಯ ಹೊರಬಂದರಿನ ಉತ್ತರ ಭಾಗದಲ್ಲಿರುವ ಕರಾವಳಿ ಪ್ರದೇಶದಲ್ಲಿ ಈಗ ಮತ್ತೆ ಕಡಲ್ಕೊರೆತದ ಭೀತಿ ಶುರುವಾಗಿದೆ. ಅದೃಷ್ಟವಶಾತ್ ಬಿಪರ್ಜಾಯ್ ಚಂಡಮಾರುತ ಅಷ್ಟೇನು ತೊಂದರೆ ಮಾಡದಿದ್ದರೂ, ಮುಂದಿನ ದಿನಗಳಲ್ಲಿ ಮಳೆಗಾಲದಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದ ತೂಫಾನ್ ಏಳುವ ಸಾಧ್ಯತೆಗಳಿದ್ದು, ಆಗ ಇಲ್ಲಿನ ತೀರಕ್ಕೆ ಮತ್ತಷ್ಟು ಹಾನಿ ಸಂಭವಿಸಬಹುದು ಎನ್ನುವ ಆತಂಕ ಅಲ್ಲಿ ನೆಲೆಸಿರುವ ಮೀನುಗಾರರದ್ದು.
ಇಲ್ಲಿ ಕಡಲ್ಕೊರೆತಕ್ಕೆ ತಡೆಗೋಡೆ ಇಲ್ಲದಿರುವುದರಿಂದ ಪ್ರತೀ ವರ್ಷ ಸುಮಾರು 50ರಿಂದ 60 ಮೀ. ನಷ್ಟು ಪ್ರದೇಶ ಸಮುದ್ರಪಾಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಮುದ್ರ ಇಲ್ಲಿನ ಪ್ರದೇಶಗಳನ್ನು ಆಕ್ರಮಿಸುತ್ತಿದೆ. ಕಳೆದ ವರ್ಷ 200ಕ್ಕಿಂತಲೂ ಅಧಿಕ ತೆಂಗಿನ ಮರಗಳು ಕಡಲ್ಕೊರೆತಕ್ಕೆ ಬಲಿಯಾಗಿದ್ದು, ಹಾನಿಯಾಗಿದ್ದ ರಸ್ತೆಉನ್ನು ಇನ್ನೂ ಸರಿಪಡಿಸಿಲ್ಲ. ಈಗ ಆ ರಸ್ತೆಯೂ ಅಪಾಯದಲ್ಲಿದೆ. ಇಲ್ಲಿ ಕಡಲ ತೀರದ ಸಮೀಪವೇ 60-70 ಮನೆಗಳಿದ್ದು, ಒಟ್ಟಾರೆ ಈ ಪ್ರದೇಶದಲ್ಲಿ 200ಕ್ಕೂ ಮಿಕ್ಕಿ ಮನೆಗಳಿವೆ. ಈ ವರ್ಷ ಬಾವಿ ನೀರು ಉಪ್ಪು, ಇಷ್ಟು ವರ್ಷಗಳಲ್ಲಿ ಇಲ್ಲಿನ ಬಾವಿ ನೀರು ಉಪ್ಪಾಗಿರಲಿಲ್ಲ. ಆದರೆ ಈ ವರ್ಷದ ಕಳೆದ 2-3 ತಿಂಗಳಿನಿಂದ ಬಾವಿ ನೀರು ಸಹ ಉಪ್ಪಾಗಿದೆ. ಇದರಿಂದ ಈ ಭಾಗದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದರು.
ಮರವಂತೆಯ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಕ್ಕೆ ಕಳೆದ ವರ್ಷದ ಜುಲೈನಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಬಂದು ನೋಡಿ ಹೋಗಿದ್ದರು. ಆದರೆ ಸಿಎಂ ಅವರೇ ಬಂದು ಹೋದರೂ ಅದರಿಂದ ಇಲ್ಲಿಗೆ ಆದ ಪ್ರಯೋಜನ ಮಾತ್ರ ಏನೇನೂ ಇಲ್ಲ. ಬಂದಾಗ ಎಲ್ಲ ಭರವಸೆ ಕೊಟ್ಟು ಹೋಗಿದ್ದರು. ಆದರೆ ಆಗಿದ್ದು ಮಾತ್ರ ಶೂನ್ಯ ಎನ್ನುವುದಾಗಿ ಇಲ್ಲಿನ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊರಬಂದರಿನ ಉತ್ತರ ಭಾಗದ ಕರಾವಳಿ ಪ್ರದೇಶದಲ್ಲಿ ಸುಮಾರು 1 ಕಿ.ಮೀ. ದೂರದವರೆಗೆ ಬೀಚ್ನಲ್ಲಿ ಮಾಡಿರುವಂತೆ ‘ಟಿ’ ಆಕಾರದ ಬ್ರೇಕ್ ವಾಟರ್ ಮಾಡಿದರೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಗಬಹುದು ಎನ್ನುವುದು ಇಲ್ಲಿನ ಮೀನುಗಾರರ ಅಭಿಪ್ರಾಯ. ಅದಕ್ಕಾಗಿ ಸುಮಾರು 10ರಿಂದ 12ಕೋ.ರೂ. ಅನುದಾನ ಬೇಕಾಗಬಹುದು.
ನೂರಿನ್ನೂರು ತೆಂಗಿನ ಮರ ಹೋಗಿದೆ. ಅದಕ್ಕೆ ಈವರೆಗೆ 1 ರೂ. ಸಹ ಪರಿಹಾರ ಕೊಟ್ಟಿಲ್ಲ. ಸಿಎಂ, ಸಂಸದರು, ಶಾಸಕರು, ಡಿಸಿ ಎಲ್ಲರೂ ಬಂದು ಹೋಗಿದ್ದಾರೆ. ಆದರೆ ಏನೂ ಪ್ರಯೋಜನ ಆಗಿಲ್ಲ. ಪ್ರತಿ ವರ್ಷ ಇದೇ ರೀತಿ ಹಾನಿಯಾಗುತ್ತಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ ಬಾರಿ ಹಾಕಿದ ಕಲ್ಲು ನೆಲಸಮ ಆಗಿದೆ. ನಾವು ಇನ್ನು ಯಾರ ಬಳಿ ಹೇಳಬೇಕು?-ನಾಗರಾಜ ಖಾರ್ವಿ, ಮರವಂತೆ
ಶಾಶ್ವತ ಪರಿಹಾರಕ್ಕಾಗಿ ನಮ್ಮ ಇಲಾಖೆಯಿಂದ ಇಲ್ಲಿಗೆ ಸುಮಾರು 1 ಕಿ.ಮೀ. ನಷ್ಟು ದೂರದವರೆಗೆ ‘ಟಿ’ ಆಕಾರದ ಬ್ರೇಕ್ವಾಟರ್ ಅಥವಾ ಸಾಮಾನ್ಯ ಬ್ರೇಕ್ವಾಟರ್ಗೆ ಅಂದಾಜು ಪಟ್ಟಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ ಸಿಎಂ ಅವರೇ ಹೇಳಿರುವ ಡಕ್ ಆ್ಯಂಡ್ ಫುಟ್ ಅಥವಾ ಸೀ ವೇವ್ ಬ್ರೇಕರ್ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಆದರೆ ಅದಕ್ಕೆ ದೊಡ್ಡ ಮಟ್ಟದ ಅನುದಾನ ಅಗತ್ಯವಿದ್ದು, ಸರ್ಕಾರ ಅನುದಾನ ನೀಡಿದರೆ ಮಾಡಬಹುದು.-ಉದಯ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬಂದರು ಇಲಾಖೆ