

ರಾಯಚೂರು ಕಾರ್ಮಿಕರ ಆರೋಗ್ಯ ರಕ್ಷಣೆಯನ್ನು ಮುಖ್ಯ ಗುರಿಯಾಗಿಸಿಟ್ಟುಕೊಂಡು ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸಲು ವಾಹನವನ್ನು ಲೋಕಾರ್ಪಣೆಗೊಳಿಸಲಾಗಿದೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಗರದ ರಾಯಚೂರು ಗ್ರಾಮೀಣ ಶಾಸಕರ ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಂಚಾರ ಆರೋಗ್ಯ ಘಟಕದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಮಿಕರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಅವರಿದ್ದ ಕಡೆಗೇ ಈ ವಾಹನವು ಸಂಚರಿಸಿ ಅವರಿಗೆ ಆರೋಗ್ಯ ಸೇವೆ ಒದಗಿಸಲಿದೆ. ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಎಲ್ಲ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಆರತಿ ಅವರು ಮಾತನಾಡಿ, ಜಿಲ್ಲೆಯ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಅವರಿರುವ ಸ್ಥಳಕ್ಕೇ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸುವುದು, ಚಿಕಿತ್ಸೆ ಹಾಗೂ ಸಲಹೆ ನೀಡಲು ಮೊದಲಾದ ಸೇವೆ ಒದಗಿಸಲು ಜಿಲ್ಲೆಯಲ್ಲಿ 3 ಸಂಚಾರಿ ಆರೋಗ್ಯ ಘಟಕಗಳನ್ನು ಸಜ್ಜುಗೊಳಿಸಲಾಗಿದೆ.
ಕಾರ್ಮಿಕ ಇಲಾಖೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ರೂಪುಗೊಂಡಿರುವ ಈ ಘಟಕಗಳಲ್ಲಿ ವಿವಿಧ ತಪಾಸಣೆಗಳು, ಹೈಟೆಕ್ ಆರೋಗ್ಯ ಸೌಲಭ್ಯ ವ್ಯವಸ್ಥೆಯಿದ್ದು, ಒಂದು ಕ್ಲಿನಿಕ್ನಲ್ಲಿ ಹೊರರೋಗಿಗಳಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಇದರಲ್ಲಿ ಸಿಗಲಿವೆ ಎಂದರು.
ಕಾರ್ಮಿಕ ಕಾರ್ಡ್ ಹೊಂದಿರುವ ಜಿಲ್ಲೆಯ 1.13 ಲಕ್ಷ ಜನ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೂ ಆರೋಗ್ಯ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ವೈದ್ಯಕೀಯ ಉಪಕರಣಗಳು, ಪ್ರಯೋಗಾಲಯದ ಉಪಕರಣಗಳು ಹಾಗೂ ವಿವಿಧ ವೈದ್ಯಕೀಯ ಬಳಕೆ ವಸ್ತುಗಳು ಸೇರಿದಂತೆ ಒಟ್ಟು 13 ರೀತಿಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಸಿಬ್ಬಂದಿಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆಯೂ ಇದೆ.
ಜಿಪಿಎಸ್ ವ್ಯವಸ್ಥೆಯೂ ಲಭ್ಯವಿದ್ದು, ತೆರಳುವ ಸ್ಥಳ, ಕಾರ್ಯಾಚರಣೆ ಸಮಯ, ಎಲ್ಲಿ ತಂಗುತ್ತದೆ ಎಂಬ ಎಲ್ಲ ಮಾಹಿತಿಯೂ ಕಚೇರಿಗೆ ತಲುಪಲಿದೆ. ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಯು ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.
ನಗರ ಶಾಸಕರಿಂದಲೂ ಚಾಲನೆ ಇದಕ್ಕೂ ಮುಂಚೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಂಚಾರ ಆರೋಗ್ಯ ಘಟಕದ ವಾಹನಕ್ಕೆ ನಗರ ಶಾಸಕ ಡಾ.ಶಿವರಾಜ ಎಸ್.ಪಾಟೀಲ್ ಅವರು ತಮ್ಮ ಗೃಹಕಚೇರಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಮಹ್ಮದ್ ಉಮರ್ ಅಬ್ದುಲ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ, ಕಾರ್ಮಿಕ ಇಲಾಖೆಯ ಸಿಬ್ಬಂದಿ ನಾಗರಾಜ, ಡಾ.ತನ್ವೀರ್, ಕೌಶಿಕ್ ಸೇರಿದಂತೆ ಅನೇಕರು ಇದ್ದರು.