ಕೆ.ಆರ್.ನಗರ: ಪಟ್ಟಣದಾದ್ಯಂತ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷ ಆಫ್ ಇಂಡಿಯಾ(ಎಸ್‌ಡಿಪಿಐ)ದ ಸದಸ್ಯರು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ರಮೇಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ನದೀಂ ಉಲ್ಲಾಖಾನ್ ಮಾತನಾಡಿ, ಪಟ್ಟಣದಾದ್ಯಂತ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಹಾಗೂ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಬೀದಿಗಳಲ್ಲಿ ತಿರುಗಾಡುವಾಗ ಬೀದಿ ನಾಯಿಗಳ ಹಿಂಡು ಸಾಮೂಹಿಕವಾಗಿ ದಾಳಿ ಮಾಡುತ್ತಿವೆ. ಹಲವರು ವಾಹನಗಳಿಂದ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆಗಳು ಸಹ ಜರುಗಿವೆ ಎಂದರು.
ಮುಸ್ಲಿಂ ಬಡಾವಣೆಯ ನಿವಾಸಿ ಫಜಲ್ ಖಾನ್ ಅವರ ಮಗ ಇಮ್ರಾನ್‌ಖಾನ್‌ನನ್ನು ನಾಯಿಗಳ ಹಿಂಡು ಮನೆಯೊಳಗೆ ನುಗ್ಗಿ ಎಳೆದು ಹೊರತಂದು ಕಚ್ಚಿ ಗಾಯಗೊಳಿಸಿವೆ. ಅಕ್ಕಪಕ್ಕದ ಜನರು ಸಮಯಕ್ಕೆ ಧಾವಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಸಾವು-ನೋವು ಸಂಭವಿಸಿದ್ದರೆ ಇದಕ್ಕೆ ಯಾರು ಹೊಣೆ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಬೀದಿ ನಾಯಿಗಳ ಹಾವಳಿ ಬಗ್ಗೆ ಹಲವು ಬಾರಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನೆಪಕ್ಕೆ ಸಭೆಯಲ್ಲಿ ಚರ್ಚೆ ನಡೆಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಹಿತ ಕಾಯುವಲ್ಲಿ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಪುರಸಭೆಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಪಿಐನ ಮುಜಾಹೀದ್, ಸೈಯದ್ ಇರ್ಫಾನ್, ಮುಹೀಬ್, ಮೊಹಮ್ಮದ್ ಅವೇಝ್ ಮತ್ತು ಮೊಹಮ್ಮದ್ ನವಾಝ್ ಇತರರಿದ್ದರು.