

ಮೈಸೂರು: ಮುಸ್ಲಿಂ ಧರ್ಮಗುರು ಅಕ್ಮಲ್ ಪಾಷ ಕೊಲೆ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಶಾಂತಿನಗರ ಬಡಾವಣೆಯ ಮಹದೇವಪುರ ಮುಖ್ಯರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಕ್ಮಲ್ ಪಾಷ ಅವರ ಕೊಲೆಯನ್ನು ತೀವ್ರವಾಗಿ ಖಂಡಿಸಿದರು.
ಕಳೆದ ಶುಕ್ರವಾರ ಮೈಸೂರಿನ ರಾಜೀವ್‌ನಗರದಲ್ಲಿ ನಡೆದ ಈ ಕೊಲೆ ಮಾಡಿದವರನ್ನು ಮತ್ತು ಅವರಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಪೊಲೀಸರು ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.
ಕೊಲೆಯಾದವರು ಅನ್ಯಾಯಗಳ ವಿರುದ್ಧ ದನಿ ಎತ್ತಿದ ಮುಸ್ಲಿಂ ಧರ್ಮಗುರು. ಮುಖ್ಯಮಂತ್ರಿಯವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಕಿಡಿಕಾರಿದ ಪ್ರತಿಭನಾಕಾರರು, ಮೃತರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ನೀಡಬೇಕು ಆಗ್ರಹಿಸಿದರು. ರಾಜಾರೋಷವಾಗಿ ಕೊಲೆ ಮಾಡುವಷ್ಟು ಧೈರ್ಯ ತೋರಿರುವುದು ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದೂ ದೂರಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ರಫತ್ ಖಾನ್, ಮುಖಂಡರಾದ ಅಫ್ಸರ್ ಕೊಡ್ಲಿಪೇಟೆ, ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ತಬ್ರೇಝ್ ಸೇಠ್ ಇನ್ನಿತರರಿದ್ದರು.