ಎಸ್‌ಡಿಪಿಐಯಿಂದ ಗೃಹ ಸಚಿವರು ರಾಜೀನಾಮೆಗೆ ಆಗ್ರಹ

Published on

ಮಂಗಳೂರು: ಗುಂಪು ಹಲ್ಲೆಯಿಂದ ಕುಡುಪುವಿನಲ್ಲಿ ಯುವಕ ಅಶ್ರಫ್ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವರು ತಾವು ನೀಡಿರುವ ಹೇಳಿಕೆ ನೀಡಿರುವುದನ್ನು ವಿರೋಧಿಸಿದ ಎಸ್‌ಡಿಪಿಐ ಗೃಹ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿದೆ.

ಈಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್, ನೆರೆಯ ಶತ್ರು ದೇಶದ ಪರ ಜೈಕಾರ ಕೂಗಿದ ಕಾರಣಕ್ಕೆ ಆ ಯುವಕನ ಮೇಲೆ ಹಲ್ಲೆ ನಡೆದಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ಅಥವಾ ಸಂಘಪರಿವಾರ ಒಳಗೊಂಡ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದರು.

ಆರೋಪಿಗಳನ್ನು ಸಮರ್ಥಿಸುವ ರೀತಿಯ ಗೃಹ ಸಚಿವರ ಹೇಳಿಕೆಯು ಬಿಜೆಪಿಗರಿಗೆ ಮಾತನಾಡಲು ಆಹಾರ ಒದಗಿಸಿದಂತೆ ಆಗುತ್ತದೆ. ಗೃಹಸಚಿವರು ತಮ್ಮ ಹೇಳಿಕೆ ಹಿಂಪಡೆಯದಿದ್ದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರಿಸಲಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ನಡೆಯ ಬಗ್ಗೆಯೂ ಸಂಶಯ ಮೂಡುವಂತಾಗಿದೆ. ತರಾತುರಿಯಲ್ಲಿ ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸಲಾಗಿದೆ. ರಾಜ್ಯ ಸರ್ಕಾರ ಯುವಕನ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ಪ್ರಮುಖರಾದ ರಿಯಾಜ್ ಕಡಂಬು, ನಿಸಾರ್ ಅಹಮ್ಮದ್, ಸಿದ್ದೀಕ್ ಬೆಂಗ್ರೆ, ಅಕ್ಬರ್ ಕುದ್ರೋಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net