

ಮಡಿಕೇರಿ: ಒಳ ಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಸಂವಿಧಾನದ ಪರಿಚ್ಛೇದ ೩೪೧ಕ್ಕೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರಿಗೆ ಮನವಿ ಸಲ್ಲಿಸಿದ ಪ್ರಮುಖರು ಸರ್ಕಾರ ಶೀಘ್ರ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಕಲೀಲ್‌ರವರು, ಜಾತಿ ವ್ಯವಸ್ಥೆಯ ಕಾರಣಕ್ಕೆ ಶತಮಾನಗಳಿಂದ ಅವಕಾಶ ವಂಚಿತರಾದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ದೇಶದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಆದರೆ ಜಾತಿ ವ್ಯವಸ್ಥೆ ಅತ್ಯಂತ ಸಂಕೀರ್ಣವಾದುದ್ದರಿಂದ ಮೀಸಲಾತಿ ಮೂಲಕ ಸಿಗಬೇಕಾದ ಅನುಕೂಲ ಮತ್ತು ಸೌಲಭ್ಯಗಳು ಎಲ್ಲ ಸಮುದಾಯಗಳಿಗೂ ಸಮಾನವಾಗಿ ದೊರೆಯುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗಾಗಿ ಕಳೆದ ೩೦ ವ?ರ್ಗಳಿಂದ ಹೋರಾಟಗಳು ನಿರಂತರವಾಗಿ ನಡೆದುಕೊಂಡೆ ಬರುತ್ತಿವೆ. ೨೦೦೭ರಲ್ಲಿ ಈ ಬೇಡಿಕೆಯನ್ನು ಪರಿಶೀಲಿಸುವ ಉದ್ದೇಶದಿಂದ ಅಂದಿನ ಕರ್ನಾಟಕ ಸರ್ಕಾರ ಸದಾಶಿವ ಆಯೋಗವನ್ನು ರಚನೆ ಮಾಡಿತು. ಆ ಆಯೋಗವು ೨೦೧೨ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ವರದಿಯಲ್ಲಿ ಆಯೋಗವು ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ಶತಮಾನಗಳಿಂದ ತುಳಿತಕ್ಕೊಳ್ಳಗಾದ ಅವಕಾಶ ವಂಚಿತ ಸಮುದಾಯಗಳ ಏಳಿಗೆಗಾಗಿ ಮೀಸಲಾತಿ ಜಾರಿಯಲ್ಲಿದೆ. ಆದರೆ ಆ ಮೀಸಲಾತಿಯಲ್ಲಿಯೂ ಕೂಡ ಅಸಮಾನತೆ ಇದ್ದರೆ ಶತಮಾನಗಳ ಅಸಮಾನತೆ ಮೀಸಲಾತಿ ಇದ್ದ ಹೊರತಾಗಿಯೂ ಮುಂದುವರಿಸಿಕೊಂಡು ಹೋದಂತೆ ಆಗುತ್ತದೆ. ಹಾಗಾಗಿ ಒಳ ಮೀಸಲಾತಿಯನ್ನು ತಕ್ಷಣ ಜಾರಿಯಾಗುವಂತೆ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಶ್ವತ ಪರಿಹಾರವಾಗಿ ಸಂವಿಧಾನದ ಪರಿಚ್ಛೇದ ೩೪೧ಕ್ಕೆ ಒಕ್ಕೂಟ ಸರ್ಕಾರ ಸೂಕ್ತ ತಿದ್ದುಪಡಿಯನ್ನು ತರುವ ಮೂಲಕ ಒಳ ಮೀಸಲಾತಿ ಜಾರಿಗೆ ಅನುವು ಮಾಡಿಕೊಡಬೇಕು. ಈ ತಿದ್ದುಪಡಿಯನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕು ಎಂದು ಕಲೀಲ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರು ಹಾಗೂ ನಗರಸಭಾ ಸದಸ್ಯರಾದ ಮನ್ಸೂರ್, ಬಶೀರ್ ಹಾಗೂ ನಗರಾಧ್ಯಕ್ಷ ರಿಜ್ವಾನ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.