ವಕ್ಫ್ ತಿದ್ದುಪಡಿ ಮಸೂದೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

SDPI
Published on

ಕುಶಾಲನಗರ:

ಕೇಂದ್ರ ಸರ್ಕಾರದ ಪ್ರಸ್ತಾಪಿತ ವಕ್ಫ್ ತಿದ್ದುಪಡಿ ಮಸೂದೆ ಖಂಡಿಸಿ ಎಸ್‌ಡಿಪಿಐ ವತಿಯಿಂದ ಕುಶಾಲನಗರದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಈ ಮಸೂದೆ ಅಸಾಂವಿಧಾನಿಕವಾಗಿದ್ದು, ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ನೇರ ಅಪಾಯ ಉಂಟುಮಾಡುತ್ತದೆ.

ಶತಮಾನಗಳಿಂದ ಸಮಾಜ ಹಿತಕ್ಕಾಗಿ ಕಾಯಲಾದ ವಕ್ಫ್ ಆಸ್ತಿಗಳ ಸ್ವಾಯತ್ತತೆಯನ್ನು ಈ ಮಸೂದೆ ಕದಡುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಮೀನ್ ಮೋಹ್ಸಿನ್ ಈ ದಮನಕಾರಿ ಮಸೂದೆಯನ್ನು ತಿರಸ್ಕರಿಸುವಂತೆ ರಾಜ್ಯದ ಜನತೆಗೆ ಎಸ್‌ಡಿಪಿಐ ಕರ್ನಾಟಕ ಘಟಕ ಕರೆ ನೀಡಿದೆ. ಸರ್ಕಾರ ವಕ್ಫ್ ಆಸ್ತಿಗಳನ್ನು ನಿಯಂತ್ರಿಸಲು ಮುಂದಾಗಿರುವುದು ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವಾಗಿದೆ.

ಈ ಮಸೂದೆಯ ವಿರುದ್ಧ ದೇಶವ್ಯಾಪಿ ಪ್ರತಿಭಟನೆಯ ಭಾಗವಾಗಿ, ಎಸ್‌ಡಿಪಿಐ ಕೊಡಗು ಜಿಲ್ಲಾ ಘಟಕದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ, ಸಂವಿಧಾನದ ಹಕ್ಕುಗಳನ್ನು ರಕ್ಷಿಸಲು ಜನತೆ ಒಗ್ಗೂಡಬೇಕು ಎಂದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ಜಿಲ್ಲಾ ಕಾರ್ಯದರ್ಶಿ ಬಶೀರ್, ಜಿಲ್ಲಾ ನಾಯಕ ಅಬ್ದುಲ್ಲಾ ಅಡಕ್ಕರ್, ಜಿಲ್ಲಾ ಖಜಾಂಚಿ ಅಕ್ಮಲ್ ಪಾಷಾ, ಜಲೀಲ್, ರಿಜ್ವಾನ್, ಮಡಿಕೇರಿ ವಿಧಾನಸಭಾ ಅಧ್ಯಕ್ಷ ಬಾಷಾ, ನಗರ ಅಧ್ಯಕ್ಷ ಜಕ್ರಿಯಾ, ಜಾಮಿಯಾ ಮಸೀದಿ ಅಧ್ಯಕ್ಷ ತಾಹಿರ್, ಜಾಮಿಯಾ ಮಸೀದಿ ಕಾರ್ಯದರ್ಶಿ ರಫೀಕ್ ಸೇರಿದಂತೆ ಅನೇಕ ಮುಖಂಡರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net