

ಮುಳಬಾಗಿಲು: ಸರ್ಕಾರಿ ಶಾಲೆಗಳ ಬಲವರ್ಧನೆಗೆ ಇಲಾಖೆ ಜತೆಗೆ ಶಿಕ್ಷಕರು ಮತ್ತು ಎಸ್ಡಿಎಂಸಿ ಸದಸ್ಯರ ಪಾತ್ರ ಮುಖ್ಯ. ಯಾವ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಉತ್ತಮವಾಗಿರುತ್ತದೆಯೋ ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ಹೇಳಿದರು.
ನಗರದ ಡಿವಿಜಿ ಗಡಿನಾಡು ಕನ್ನಡ ಭವನದಲ್ಲಿ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಹಮ್ಮಿಕೊಂಡಿದ್ದ ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಣದಲ್ಲಿ ಎಸ್ಡಿಎಂಸಿಗಳ ಹಕ್ಕು ಮತ್ತು ಕರ್ತವ್ಯ ಕುರಿತ ತಾಲೂಕುಮಟ್ಟದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಶಾಲಾಭಿವೃದ್ಧಿ ಸಮಿತಿಯಲ್ಲಿ ಎಂದಿಗೂ ರಾಜಕೀಯ ಪ್ರವೇಶ ಮಾಡಬಾರದು ಎಂದು ಸಲಹೆ ನೀಡಿದರು.
ಆಯಾ ಶಾಲಾ ವ್ಯಾಪ್ತಿಯಲ್ಲಿ ಎಸ್ಡಿಎಂಸಿ ಸಮಿತಿಯ ಆಯ್ಕೆಯು ಅಲ್ಲಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪಾಲಕರೇ ಆಗಿರಬೇಕು. ಆದರೂ ಏಕೆ ಸರ್ಕಾರಿ ಕನ್ನಡ ಶಾಲೆಗಳು ಮಕ್ಕಳ ದಾಖಲಾತಿಯಲ್ಲಿ ಹಿಂದುಳಿದಿವೆ ಎಂಬ ಬಗ್ಗೆ ಮನನ ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಎಸ್ಡಿಎಂಸಿ ವೇದಿಕೆ ಅಧ್ಯಕ್ಷ ಉಮೇಶ್ ಜಿ.ಗಂಗವಾಡಿ ಮಾತನಾಡಿ, ಶಾಲೆಗಳ ಅಭಿವೃದ್ಧಿಯಲ್ಲಿ ಎಸ್ಡಿಎಂಸಿ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಬಡವರು, ಸಾಮಾನ್ಯ ರೈತರ ಮಕ್ಕಳು ಮಾತ್ರ. ಆದರೆ, ನಾವುಗಳೇ ಬೆಳಗ್ಗೆ ಶಾಲೆ ಎಷ್ಟ್ಟೊತ್ತಿಗೆ ಆರಂಭವಾಗುತ್ತದೆ?, ಸಂಜೆ ಎಷ್ಟೊತ್ತಿಗೆ ಮುಗಿಯುತ್ತದೆ ಎಂಬುದರ ಅರಿವು ಹೊಂದಿರುವುದಿಲ್ಲ. ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಗ್ರಾಮಸಭೆ ಬಗ್ಗೆ ಗಮನಹರಿಸಿ ಜನಪ್ರತಿನಿಧಿಗಳು ಮತ್ತು ಸರ್ಕಾರದ ಗಮನ ಸೆಳೆಯುವ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಬಿಇಒ ಕೆ.ಆರ್.ಗಂಗಾರಾಮಯ್ಯ, ತಹಸೀಲ್ದಾರ್ ಬಿ.ಆರ್.ಮುನಿವೆಂಟಪ್ಪ, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಸಿ.ಹರೀಶ್ ಕುಮಾರ್, ಎಸ್ಡಿಎಂಸಿ ತಾಲೂಕು ಅಧ್ಯಕ್ಷ ಹನುಮನಹಳ್ಳಿ ಸಿ.ನಾಗೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕನ್ನಸಂದ್ರ ಆರ್.ಮುನಿಕೃಷ್ಣ, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಸುಬ್ರಹ್ಮಣಿ, ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ರಾಮಮೂರ್ತಿ ನಾಯ್ಡು, ನಿವೃತ್ತ ಮುಖ್ಯಶಿಕ್ಷಕ ವಿಠಲ್ರಾವ್ ಹಾಗೂ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಇದ್ದರು.