

ಉಡುಪಿ : ವಿಶ್ವಕ್ಕೆ ಸನಾತನ ಧರ್ಮದ ದೊಡ್ಡ ಕೊಡುಗೆ ಯೋಗ. ಯೋಗ ಧರ್ಮಕ್ಕೆ ಸಂಬಂಧಪಟ್ಟದ್ದಲ್ಲ ಎಂಬುದು ಬಾಲಿಶನದ ಹೇಳಿಕೆ. ಯೋಗ ಭಾರತದ ಅಧ್ಯಾತ್ಮಿಕ ಸಂಪತ್ತು. ಮಕ್ಕಳಿಗೂ ಯೋಗದ ಮಹತ್ವದ ಬಗ್ಗೆ ತಿಳಿಸಬೇಕು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತಿರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ 'ಸೌಖ್ಯವನ' ಸಹಯೋಗದೊಂದಿಗೆ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ಜಾಥಾ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಭಗವದ್ಗೀತೆ ಯೋಗ ಶಾಸ್ತ್ರ. ಆದಿಯಿಂದ ಅಂತ್ಯದವರೆಗೆ ಯೋಗದ ಸಂದೇಶ ಹೊಂದಿರುವ ಮೂಲ ಗ್ರಂಥ. ಯೋಗವೆಂದರೆ ಆಸನ, ಪ್ರಾಣಾಯಾಮಗಳು ಮಾತ್ರವಲ್ಲ. ಇವು ಪ್ರಾಥಮಿಕ ಹಂತಗಳು. ಯೋಗದ ಮುಖ್ಯ ಉದ್ದೇಶ ದೇವರನ್ನು ತಲುಪುವುದು. ಕರ್ಮಗಳಲ್ಲಿ ಕೌಶಲ ಮತ್ತು ಪರಿಪೂರ್ಣತೆಯೇ ಯೋಗ ಎಂದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾವನೆಗೆ ಬಹುತೇಕ ಎಲ್ಲಾ ರಾಷ್ಟ್ರಗಳು ಬೆಂಬಲವ್ಯಕ್ತಪಡಿಸಿರುವುದನ್ನು ಗಮನಿಸಿದರೆ ಭಾರತ ವಿಶ್ವಗುರು ಆಗಬೇಕು ಎಂಬ ಭಾರತೀಯ ಆಶಯ ಯೋಗದ ಮೂಲಕ ಈಡೇರಿದೆ ಎನ್ನಬಹುದು ಎಂದು ಹೇಳಿದರು.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್.ಸೀತಾರಾಮ ತೋಳ್ಪಾಡಿತ್ತಾಯ, ಆದರ್ಶ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಜಿ.ಎಸ್.ಚಂದ್ರಶೇಖರ್, ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಪ್ರವಿಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.