ಎಸ್‌ಡಿಎಂ ಕಾಲೇಜಿನಲ್ಲಿ ಅಣಕು ನ್ಯಾಯಾಲಯ

mng-aug11-sdm1
Published on

ಮಂಗಳೂರು: ಕಠಿಣ ಪರಿಶ್ರಮ ವಹಿಸಿ, ಆಳವಾದ ಜ್ಞಾನ ವೃದ್ಧಿಸಿಕೊಂಡಾಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಹೇಳಿದರು.


ಎಸ್‌ಡಿಎಂ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಮೂಟ್ ಕೋರ್ಟ್ ಸೊಸೈಟಿ ಆ್ಯಂಡ್ ಕಾರ್ಪೋರೇಟ್ ಕ್ಲಬ್ ವತಿಯಿಂದ ಎಸ್‌ಡಿಎಂ ಅಲ್ಯುಮ್ನಿ ಅಸೋಸಿಯೇಶನ್ ಸಹಯೋಗದಲ್ಲಿ ಶುಕ್ರವಾರ ಎಸ್‌ಡಿಎಂ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆದ ‘ಲೆಕ್ಸ್ ಅಲ್ಟಿಮಾ 2023’ ಅಣಕು ನ್ಯಾಯಾಲಯ ಉದ್ಘಾಟಿಸಿ, ಅವರು ಮಾತನಾಡಿದರು.

ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಪೃಥ್ವಿರಾಜ್ ರೈ ಮುಖ್ಯ ಅತಿಥಿಯಾಗಿದ್ದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಸಮಗ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು. ಮೂಲಭೂತ ಕಾನೂನುಗಳ ಜ್ಞಾನ ವೃದ್ಧಿಸಿಕೊಂಡು ವರ್ತಮಾನದ ಸಾಫ್ಟ್‌ವೇರ್ ತಂತ್ರಜ್ಞಾನ ಅಳವಡಿಸಿಕೊಂಡಾಗ ಕಾನೂನು ಪದವಿ ಪೂರೈಸಿದ ತಕ್ಷಣ ಉದ್ಯೋಗವಕಾಶಗಳನ್ನು ಪಡೆಯಲು ಸಾಧ್ಯವಿದೆ ಎಂದರು.
ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತ ಅತಿಥಿಯಾಗಿದ್ದರು.


ಎಸ್‌ಡಿಎಂ ಕಾನುನು ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್ ಕೆ., ಪ್ರಧಾನ ಕಾರ್ಯದರ್ಶಿ ಸತೀಶ್ ಬಿ.ಕೆ., ಪ್ರಾಂಶುಪಾಲ ಡಾ.ತಾರಾನಾಥ, ವಿದ್ಯಾರ್ಥಿ ಕಾರ್ಯದರ್ಶಿ ಜನೈಸ್ ಮರಿಯಾ ಸಲ್ದಾನ, ನರಸಿಂಹ ಭಂಡಾರಿ, ಡಿ.ಎಂ.ದೀಕ್ಷಾ, ವಿನೀತ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.


ಅಣಕು ನ್ಯಾಯಾಲಯದ ಸಂಚಾಲಕಿ ರೇಶ್ಮಾ ಸ್ವಾಗತಿಸಿದರು. ಸಂಯೋಜಕರಾದ ಸಚಿನ್ ಹೆಗ್ಡೆ ವಂದಿಸಿದರು. ಸ್ವಾತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net