

ಬೆಳ್ತಂಗಡಿ: ಹೊಸ ಕಾಲಘಟ್ಟದಲ್ಲಿ ತಾಂತ್ರಿಕ ಆವಿಷ್ಕಾರಗಳ ನೆರವಿನೊಂದಿಗೆ ನೂತನ ಮಾಧ್ಯಮಗಳ ಪ್ರಭಾವ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಿಂದಿನ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳು ಕಾಯ್ದುಕೊಂಡಿದ್ದ ನೈತಿಕತೆ ಹಾಗೂ ನಿಖರತೆಯ ಮೌಲ್ಯಗಳಿಗನುಗುಣವಾದ ವೃತ್ತಿಬದ್ಧತೆ ಮುಂದುವರಿಯಬೇಕು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಹೇಳಿದರು.
ಉಜಿರೆ ಎಸ್‌ಡಿಎಂ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶನಿವಾರ ಆಯೋಜಿಸಿದ್ದ ಕದಂಬೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ನಡೆಸುವ ಪ್ರಾಯೋಗಿಕ ಮಾಸ ಪತ್ರಿಕೆ ಕದಂಬದ 6ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕರೊನಾ ನಂತರ ತೀವ್ರಗತಿಯಲ್ಲಿ ಪತ್ರಿಕೋದ್ಯಮ ಬದಲಾಗಿದೆ. ಮಾಧ್ಯಮ ಸಂಸ್ಥೆಗೆ ಆದಾಯ ತರುವ ಜವಾಬ್ದಾರಿ ಕೂಡ ಪತ್ರಕರ್ತರ ಹೆಗಲ ಮೇಲೆ ಬೀಳುತ್ತಿದೆ. ಪ್ರಾಯೋಗಿಕ ಪತ್ರಿಕೆಗಳು ಈ ನಿಟ್ಟಿನಲ್ಲೂ ಭಾವಿ ಪತ್ರಕರ್ತರಿಗೆ ಸಹಾಯಕವಾಗಬಲ್ಲವು. ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಗ್ಲೆನ್ ಮತ್ತು ಮಂಜುನಾಥ ಸಂಪಾದಕತ್ವದ ಕದಂಬ ಮಾಸಿಕ ಈ ನಿಟ್ಟಿನಲ್ಲಿ ಮಾದರಿಯಾಗಿದೆ ಎಂದರು.
ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹಿಂದೆ ಕಾಲೇಜಿನಲ್ಲಿ ಪ್ರಾಯೋಗಿಕ ಪತ್ರಿಕೆ ನಡೆಸಿದ್ದವರೆಲ್ಲರೂ ಪತ್ರಿಕಾರಂಗದಲ್ಲಿ ಉನ್ನತಿ ಸಾಧಿಸಿದ್ದಾರೆ ಎಂದು ಪ್ರಶಂಸಿಸಿದರು.
ಕದಂಬ ಪ್ರಾಯೋಗಿಕ ಮಾಸ ಪತ್ರಿಕೆಯ ವಿದ್ಯಾರ್ಥಿ ಸಂಪಾದಕರಾಗಿ ತಮಗೆದುರಾದ ಸವಾಲುಗಳ ಬಗ್ಗೆ ಮಂಜುನಾಥ್ ಎ.ಡಿ.ಪ್ರಸ್ತಾಪಿಸಿದರು. ಮಾಸಿಕದ ಇನ್ನೋರ್ವ ವಿದ್ಯಾರ್ಥಿ ಸಂಪಾದಕ ಗ್ಲೆನ್ ಗುಂಪಲಾಜೆ ಮಾಸಿಕ ಹೊರತರುವ ಪ್ರಯೋಗಶೀಲತೆಯ ಹಿಂದಿನ ವಿವಿಧ ಹಂತ ನೆನಪಿಸಿಕೊಂಡರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ ಹೆಗ್ಡೆ ಇದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಸ್ವಾಗತಿಸಿ. ಮಾನಸಾ ಅಗ್ನಿಹೋತ್ರಿ ನಿರೂಪಿಸಿ, ಗ್ಲೆನ್ ಗುಂಪಲಾಜೆ ವಂದಿಸಿದರು.
ವಿದ್ಯಾರ್ಥಿಗಳು ಪ್ರತಿವರ್ಷ ನಿಯತಕಾಲಿಕಗಳನ್ನು ಹೊರತರುವ ಕ್ರಿಯಾಶೀಲತೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಕ್ರಿಯಾಶೀಲತೆಯ ಪರಂಪರೆಗೆ ಕದಂಬ ಮಾಸಿಕ ಮಹತ್ವದ ಸೇರ್ಪಡೆ.- ಡಾ.ಭಾಸ್ಕರ ಹೆಗ್ಡೆಮುಖ್ಯಸ್ಥ, ಪತ್ರಿಕೋದ್ಯಮ ವಿಭಾಗ