

ಮಂಗಳೂರು: ಬಹು ಭಾಷೆ ಕಲಿಯುವುದರಿಂದ ನಮ್ಮಲ್ಲಿ ಸಂಸ್ಕಾರ ಬೆಳೆಯುತ್ತದೆ. ಅದಕ್ಕಾಗಿ ಇತರ ಭಾಷೆಗಳನ್ನು ಕಲಿಯುವ. ನಮ್ಮೆ ನೆಲದ ತಾಯಿ ಭಾಷೆ ತುಳು ಮಾತನಾಡುವ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಐಸಿರ ಸಾಂಸ್ಕೃತಿಕ ಶೃಂಗಸಭೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತುಳು ಭಾಷೆಗೆ ಸ್ವಂತ ಲಿಪಿ ಇರುವುದು ನಮ್ಮ ಹಿರಿಮೆ. ತುಳು ಕೇವಲ ಭಾಷೆಯಾಗಿರದೆ, ಸಂಸ್ಕೃತಿ ಆಚಾರ ವಿಚಾರಗಳೊಂದಿಗೆ ಬೆಸೆದುಕೊಂಡಿದೆ. ತುಳುನಾಡಿನ ದೈವಾರಾಧನೆ, ನಾಟಕ, ಕಂಬಳ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲೆಗಳು ಸಂಸ್ಕೃತಿಯ ಪ್ರತೀಕವಾಗಿದೆ. ತುಳು ನಾಡಿನ ಆಚರಣೆಗಳೇ ವಿಶಿಷ್ಟವಾಗಿದೆ. ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಐಸಿರದ ಮೂಲಕ ತುಳುನಾಡ ಸಂಸ್ಕೃತಿ ಅನಾವರಣಗೊಂಡಿದೆ ಎಂದವರು ಹೇಳಿದರು.
ಹಿರಿಯರು ನಮಗೆ ನೀಡಿರುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ. ಹೊರ ಭಾಗದಿಂದ ಬಂದವರು ತುಳು ಕಲಿಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಐಸಿರ ಕಾರ್ಯಕ್ರಮದ ಮೂಲಕ ತುಳು ಸಂಸ್ಕೃತಿ ಅನಾವರಣಗೊಂಡಿದೆ. ತುಳು ಮಾತನಾಡುವ 40ಕ್ಕೂ ಅಧಿಕ ಸಮುದಾಯಗಳು ನಮ್ಮ ಸಮಾಜದಲ್ಲಿವೆ. ತುಳು ಭಾಷೆಯ ಪ್ರಗತಿಗೆ ನಾಟಕಗಳೂ ಪೂರಕವಾಗಿದೆ. ತುಳುವಿನಲ್ಲಿ ಸಾವಿರಾರು ನಾಟಕಗಳು ಪ್ರದರ್ಶನಗೊಂಡಿವೆ. ಸಿನಿಮಾ ಕ್ಷೇತ್ರದ ಸೇವೆಯೂ ಕೂಡ ತುಳು ಉಳಿವಿಗೆ ಕಾರಣವಾಗಿದೆ.
ತುಳು ಆಡುಭಾಷೆಯಾಗಿಯೂ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಜಗತ್ತಿನೆಲ್ಲೆಡೆ ಮೆರೆಯುತ್ತಿದೆ. ಮಂಗಳೂರು ವಿವಿ ಮಾತ್ರವಲ್ಲದೆ ದೇಶ ವಿದೇಶದ ಅನೇಕ ವಿವಿಗಳು ತುಳು ಅಧ್ಯಯನ ಕೇಂದ್ರವನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ತುಳುವಿನ ಸಾಂಸ್ಕೃತಿಕ ವಿಚಾರಗಳನ್ನು ಉಳಿಸಬೇಕು. ತುಳು ಭಾಷೆ ಬೆಳೆಯಲು ವಿದ್ಯಾರ್ಥಿಗಳು ಕೈ ಜೋಡಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಎಂ ವ್ಯವಹಾರಾಡಳಿತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದೇವರಾಜ್, ಉದ್ಯಮಿ ಕುಸುಮಾದರ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಧರ್ಮಪಾಲ್ ದೇವಾಡಿಗ ಉಪಸ್ಥಿತರಿದ್ದರು. ವಿಜೇತ್ ಸ್ವಾಗತಿಸಿದರು. ದೀಪಕ್ ನಿರೂಪಿಸಿದರು.