ಮೈಸೂರಿನಲ್ಲಿ ಸಂಭ್ರಮದಿಂದ ನೆರವೇರಿದ ಎಸ್‌ಡಿಎಂ ಕಾಲೇಜು ವಾರ್ಷಿಕೊತ್ಸವ

SDM College
Published on

ಮೈಸೂರು: ದೌರ್ಬಲ್ಯ ನೆನೆದು ದುಃಖಿತರಾಗಬೇಡಿ, ದೌರ್ಬಲ್ಯ ಮೆಟ್ಟಿನಿಂತು ಜೀವನದಲ್ಲಿ ಏನನ್ನಾದರು ಸಾಧಿಸುವ ಛಲ ಬೆಳೆಸಿಕೊಳ್ಳಿ ಎಂದು ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಪದವಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾನು ಬಡವ, ಎತ್ತರವಾಗಿಲ್ಲ, ಬೆಳ್ಳಗಿಲ್ಲ ಎಂಬ ಕೊರಗು ನಿಮ್ಮನ್ನು ಕಾಡಬಾರದು. ಈ ವಿಷಯಗಳನ್ನು ಪಕ್ಕಕ್ಕಿಟ್ಟು ಸಾಧನೆಯ ಕಡೆ ಮುಖ ಮಾಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿ ಎಂದು ಕಿವಿಮಾತು ಹೇಳಿದರು.

ಪ್ರತಿಯೊಂದು ಕ್ಷಣವನ್ನು ಸಂತಸದಿಂದ ಕಳೆಯಿರಿ. ಹಾಸ್ಯಪ್ರಜ್ಞೆ ನಿಮ್ಮಲ್ಲಿ ಜಾಗೃತವಾಗಿರಲಿ, ಇದು ನಿಮ್ಮ ಜೀವನವನ್ನು ಸುಂದರ ಗೊಳಿಸುತ್ತದೆ. ಪ್ರತಿದಿನ ದುಃಖ ತೋಡಿಕೊಳ್ಳುವ ವ್ಯಕ್ತಿಗಿಂತ ಪ್ರತಿದಿನ ಮುಗುಳು ನಗುವ ವ್ಯಕ್ತಿ ಎಲ್ಲರಿಗೂ ಇಷ್ಟವಾಗುತ್ತಾರೆ. ಹಾಗಾಗಿ ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳದೆ ಸಂತಸವಾಗಿರಲಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ನಾವು ಏನನ್ನಾದರು ಸಾಧಿಸಬೇಕಾದರೆ ನಮ್ಮ ಪರಿಶ್ರಮ ತುಂಬ ಮುಖ್ಯ. ಪರಿಶ್ರಮ ಇಲ್ಲದೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಪರಿಶ್ರಮ ಪಟ್ಟರೂ ಅದಕ್ಕೆ ತಕ್ಕೆ ಪ್ರತಿಫಲ ದೊರೆಯುವುದಿಲ್ಲ. ಅಂತಹ ಸಂದರ್ಭ ನಮಗೆ ದೇವರ ಅನುಗ್ರಹ ಬೇಕಾಗುತ್ತದೆ. ದೇವರ ಅನುಗ್ರಹ ಹಾಗೂ ಪರಿಶ್ರಮ ಒಟ್ಟುಗೂಡಿದಾಗ ಉತ್ತಮ ಫಲಿತಾಂಶ ದೊರೆಯುತ್ತದೆ. ದೇವರ ಅನುಗ್ರಹ ಇದ್ದರೆ ಸಾಕು ಎಂದು ಸುಮ್ಮನೆ ಕುಳಿತರೂ ಯಶಸ್ಸು ದೊರೆಯುವುದಿಲ್ಲ ಎಂದರು.

ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರೊ.ನಯನ ಕುಮಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿಹಾರಿಕಾ ಜೋಷಿ, ಕೆ.ಎಂ. ಲಿಖಿತಾ, ಎಂ.ಆರ್. ರುಚಿತಾ, ವಿ. ರಜಿತಾ, ಕೆ.ಕಾವ್ಯ, ಆರ್.ಸೃಷ್ಟಿ ಕೌಶಿಕ್, ಎಚ್.ಜೆ. ವಿಂದ್ಯಾ , ಎಂ.ಮಂಗಳಗೌರಿ, ಬಿ.ಬಿ. ಫಾತಿಮಾ ಫರ್ಜಿನ್, ಆರ್.ನಂದಿನಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net