

ಉಡುಪಿ: ನೂತನ ವೈದ್ಯಕಿಯ ಪದ್ಧತಿ ಆವಿಷ್ಕಾರದಿಂದ ಪ್ರಾಚಿನ ಆಯುರ್ವೇದದ ಮಹತ್ವ ಮರೆತಿದ್ದೇವೆ. ಋಷಿಪ್ರಣಿತ ಆಯುರ್ವೇದ ರೋಗಮೂಲವನ್ನೇ ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಮಂತ್ರಾಲಯ ರಾವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಉದ್ಯಾವರ ಕುತ್ಪಾಡಿ ಎಸ್ಡಿಎಂ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯನ ಅನಾರೋಗ್ಯಕ್ಕೆ ವಾತ, ಪಿತ್ತ, ಕ ದೋಷಗಳೇ ಕಾರಣವಾಗಿದ್ದು, ಇವುಗಳ ಅಸಮತೋಲನ ದೇಹದಲ್ಲಿ ವ್ಯಾಧಿಯಾಗಿ ಮನುಕುಲವನ್ನು ಪೀಡಿಸುತ್ತವೆ. ಅಷ್ಟಾಂಗ ಹೃದಯ, ಚರಕ ಸಂಹಿತಾ, ಶುಶ್ರುತ ಸಂಹಿತಾ, ಮಾಧವ ನಿಧಾನ ಅಧ್ಯಯನದಿಂದ ಉತ್ತಮ ವೈದ್ಯ ರೂಪುಗೊಳ್ಳುತ್ತಾರೆ. ಈ 4 ಗ್ರಂಥಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಆಯುರ್ವೇದದಲ್ಲಿ ಪರಿಹಾರವಾಗದ ವ್ಯಾಧಿಗಳಿಲ್ಲ. ದುರದೃಷ್ಟವಶಾತ್ ಆಯುರ್ವೇದವನ್ನು ಶಾಸ್ತ್ರೀಯವಾಗಿ ತಿಳಿಸುವರು ಕಡಿಮೆಯಾಗಿದ್ದಾರೆ. ಜೊತೆಗೆ ಔಷಧೀಯ ಮೂಲಿಕೆಗಳು ದೊರೆಯುತ್ತಿಲ್ಲ ಎಂದು ಹೇಳಿದರು.
ಸಂಸ್ಥೆ, ಹಣ, ಸ್ಥಳ ಇವೆಲ್ಲವಿದ್ದರೂ ಸಮರ್ಥ ಯೋಜಕರಿಲ್ಲದಿದ್ದರೆ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿ, ಹಿಂದಿನ ಕಾಲದ ಜೀವನ ಪದ್ಧತಿಯಿಂದ ನಿರೋಗಿಗಳಾಗಿದ್ದರು. ಆದರೆ ಇಂದಿನ ಭೌತಿಕ ಭೋಗ ಭಾಗ್ಯಗಳ ಧಾವಂತದಿಂದ ದೇಹ&ಮನಸ್ಸು ದುಡಿಯುವುದು ಕಡಿಮೆಯಾಗಿ ಆದಿ&ವ್ಯಾಧಿಗಳು ಬಾಧಿಸುತ್ತಿವೆ. ಇವುಗಳನ್ನು ಗುಣಪಡಿಸಲು ಆಯುರ್ವೇದದ ಅವಶ್ಯಕತೆ ಇದೆ ಎಂದರು.
ತಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈ ಸಂಸ್ಥೆಯನ್ನು ಡಾ.ಹೆಗ್ಗಡೆಯವರಿಗೆ ಹಸ್ತಾಂತರಿಸುವ ಮೂಲಕ ಯೋಗ್ಯ ವ್ಯಕ್ತಿಗೆ ಜವಾಬ್ದಾರಿ ಹಸ್ತಾಂತರಿಸಿರುವುದು ಸಂತಸ ತಂದಿದೆ. ಸಮಾಜದ ಸರ್ವತೋಮುಖ ಏಳಿಗೆಗೆ ಧರ್ಮಸ್ಥಳ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಆಯುಷ್ ಇಲಾಖೆ ಆಯುರ್ವೇದ ಮಂಡಳಿ ಅಧ್ಯಕ್ಷ ಡಾ. ಶ್ರೀನಿವಾಸ ಪ್ರಸಾದ್ , ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ವಿಪ ಸದಸ್ಯ ಡಾ. ಧನಂಜಯ ಸರ್ಜಿ, ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹಷೆೇಂರ್ದ್ರಕುಮಾರ್, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ನಿರ್ದೇಶಕ ಡಿ.ಶ್ರೇಯಸ್ ಕುಮಾರ್, ಎಸ್.ಡಿ.ಎಂ ಆಯುರ್ವೇದ ಕಾಲೇಜು ನಿರ್ದೇಶಕ ಡಾ.ಪ್ರಸನ್ನ ಎನ್.ರಾವ್, ಆಸ್ಪತ್ರೆ ಅಧೀಕ್ಷಕ ಡಾ. ನಾಗರಾಜ್ ಎಸ್., ಉಪಸ್ಥಿತರಿದ್ದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಂದಿಸಿದರು. ಕಾಲೇಜಿನ ರೋಗ ನಿಧಾನ ವಿಭಾಗ ಸಹಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಮತ್ತು ಕೌಮಾರಭೃತ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯ ನಿರೂಪಿಸಿದರು.