

ಉಡುಪಿ: ಯುವ ವೈದ್ಯರು ಜನರ ಶುಶ್ರೂಷೆ ಪುಣ್ಯದ ಕಾರ್ಯವೆಂದು ಭಾವಿಸಬೇಕು. ಬೇರೆ ಔಷಧ ಪದ್ಧತಿಗಳಿಂದ ಅಡ್ಡಪರಿಣಾಮ ಹೆಚ್ಚು. ಆದರೆ ಆಯುರ್ವೇದದಲ್ಲಿರುವ ವನಸ್ಪತಿ ಔಷಧಗಳು ದೇಹಕ್ಕೆ ಹಾನಿಕಾರಕವಲ್ಲ ಎಂದು ಜಾನಪದ ವೈದ್ಯ ಕಲ್ಲಪ್ಪ ಫಕೀರಪ್ಪ ಪಡಿಶ್ಯಾವಿಗೆ ಹೇಳಿದರು.
ಸೋಮವಾರ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಜಾನಪದ ವೈದ್ಯಕಿಯ ಸಂಶೋಧನಾ ಕೇಂದ್ರದ ವತಿಯಿಂದ ನೀಡುವ ರಾಜ್ಯಮಟ್ಟದ ಜನಪದ ವೈದ್ಯ ಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮುಂದಿನ ದಿನದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಪಾರಂಪರಿಕ ವೈದ್ಯಪದ್ಧತಿಯನ್ನು ಯುವಜನತೆ ಮುಂದುವರಿಸಬೇಕು. ಆಯುರ್ವೇದ ಜೀವನಕ್ರಮವನ್ನು ಆಳವಡಿಸಿಕೊಂಡರೆ ವೈದ್ಯರಲ್ಲಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಆಯುರ್ವೇದ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ಎಸ್ ಡಿ ಎಂ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ವೈದ್ಯಕಿಯ ಅಧೀಕ್ಷಕ ಡಾ. ನಾಗರಾಜ್ ಎಸ್., ನಿವೃತ್ತ ಪ್ರಾಂಶುಪಾಲ ಡಾ. ಕೆ.ಆರ್. ರಾಮಚಂದ್ರ, ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ.ಎಂ. ಕಂಠಿ, ಆಡಳಿತ ವಿಭಾಗ ಮುಖ್ಯಸ್ಥ ಡಾ. ವೀರಕುಮಾರ ಕೆ., ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಬಿ.ಎನ್., ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ. ಗಿರಿ ಉಪಸ್ಥಿತರಿದ್ದರು.
ಜನಪದ ವೈದ್ಯಕಿಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿಕೃಷ್ಣ ಎಸ್., ಸದಸ್ಯರಾದ ಡಾ. ರವಿ ಕೆ.ವಿ. ಸಹಕರಿಸಿದರು. ಡಾ. ಅರ್ಹಂತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು.