

ಮೈಸೂರು: ಕನದಾಸರು ಒಂದುವೇಳೆ 20ನೇ ಶತಮಾನದ ಕವಿಯಾಗಿದ್ದರೆ ಪ್ರಪಂಚದ ಎಲ್ಲ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಗಳು ಅವರಿಗೆ ದೊರೆಯುತಿತ್ತು ಎಂದು ವಿದ್ವಾಂಸ ಡಾ.ಪಿ. ಬೆಟ್ಟೇಗೌಡ ಅಭಿಪ್ರಾಯಪಟ್ಟರು.
ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ, ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ವತಿಯಿಂದ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕನಕ ಸಂಸ್ಕೃತಿ ಸಂಚಲನ’ ಕನಕ ನಡೆ-ನುಡಿ ಉತ್ಸವದಲ್ಲಿ ಮಾತನಾಡಿ, ಕನಕದಾಸರ ಸಾಹಿತ್ಯ ಕನ್ನಡಿ ಇದ್ದ ಹಾಗೆ. ಕನ್ನಡಿಯ ಮುಂದೆ ನಾವು ನಿಂತರೆ ನಮ್ಮ ದೋಷಗಳು ಗೋಚರಿಸುವ ರೀತಿಯಲ್ಲಿ ಕನಕದಾಸರ ಸಾಹಿತ್ಯ ನಮ್ಮ ಗುಣದೋಷ ತೋರಿಸುತ್ತದೆ. ಹಾಗಾಗಿ ಕನಕದಾಸರ ಸಾಹಿತ್ಯವನ್ನು ಎಲ್ಲರು ಹೆಚ್ಚಾಗಿ ಓದಬೇಕು ಎಂದರು.
ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಮಾತನಾಡಿ, ನಮ್ಮ ಬಳಿ ಅಕ್ಷರಸ್ಥರು ಬರೆದ ಚರಿತ್ರೆ ಮಾತ್ರ ಇದೆ. ಹಾಗಿದ್ದಲ್ಲಿ ಅನಕ್ಷರಸ್ಥರು ಚರಿತ್ರೆ ಸೃಷ್ಟಿ ಮಾಡಲಿಲ್ಲವೇ? ಅವರ ಚರಿತ್ರೆ ಎಲ್ಲಿ ಮರೆಯಾಯಿತು? ಹಾಗಾಗಿ ನಾವು ಚರಿತ್ರೆಯನ್ನು ಸಂಸ್ಕೃತಿಯ ಹಿನ್ನೆಲೆಯಲ್ಲಿ ಪುನರಾವಲೋಕನ ಮಾಡುವ ಅವಶ್ಯಕತೆ ಇದ್ದು, ಕನಕದಾಸರ ವಿಚಾರದಲ್ಲೂ ಅದನ್ನು ಗಮನಿಸಬೇಕು. ಕನಕದಾಸರಿಗೆ ಸಂಬಂಧಿಸಿದ ವಿಚಾರಗಳು ಇತಿಹಾಸದ ಪುಟಗಳಲ್ಲಿ ದಾಖಲೆ ಆಗದೆ ಹೋದರೂ ಅವರು ಜನರ ಮನದಾಳದಲ್ಲಿ ಉಳಿದಿದ್ದಾರೆ ಎಂದರು.
ಕನಕದಾಸರಿಗೆ ಶಾಸ್ತ್ರ, ವ್ಯಾಕರಣ, ಸಾಹಿತ್ಯ, ಯುದ್ಧ ಸೇರಿದಂತೆ ಎಲ್ಲ ಕಲೆಗಳನ್ನು ಅವರ ತಂದೆ ಕಲಿಸಿದ್ದರು. ಇದರ ಜತೆಗೆ ಕನಕಕದಾಸರ ಮನದೊಳಗೆ ಕವಿಯೊಬ್ಬ ಇದ್ದ ಕಾರಣ ಅವರು ದಾಸರಾದ ನಂತರ ಸಮಾಜದಲ್ಲಿ ಇದ್ದ ಅಸಮಾನತೆಯನ್ನು ತನ್ನ ದಾಸ ಸಾಹಿತ್ಯದ ಮೂಲಕ ಪ್ರಕಟಪಡಿಸಿದರು. ಅವರೊಬ್ಬ ಭಕ್ತ ಎಂಬ ಸತ್ಯವನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ಅದರ ಜತೆಗೆ ಅವರು ಸಮಾಜ ಸುಧಾರಕ, ಕವಿ, ದಾರ್ಶನಿಕ, ಸಂತರಾಗಿದ್ದರು. ಹಾಗಾಗಿ ಕನದಸಾಸರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಎಲ್ಲ ಅಂಶಗಳನ್ನು ಗಮನಿಸಬೇಬೇಕು ಎಂದು ಹೇಳಿದರು.
ಕನಕದಾಸರನ್ನು ಮಾಧ್ವ ಕಿಂಡಿಯ ಮೂಲಕ ನೋಡಿದರೆ ಕಾಣಲು ಸಾಧ್ಯವಿಲ್ಲ. ಅವರನ್ನು ಕನಕತ್ವದ ಮೂಲಕ ನೋಡುವ ಪ್ರಯತ್ನ ಮಾಡಿದರೆ ಅವರನ್ನು ಕಾಣಬಹುದು. ಒಂದುವೇಳೆ ನಾವು ಕನಕತ್ವದಿಂದ ಕನಕದಾಸರನ್ನು ನೋಡಿದರೆ ಅವರು ನಮಗೆ ಇಂದಿಗೂ ಪ್ರಸ್ತುತ ಎಂಬುದು ಅರಿವಾಗುತ್ತದೆ. ಕನಕದಾಸರು ತಮ್ಮ ಕಾವ್ಯದಲ್ಲಿ ಎತ್ತಿ ತೋರಿಸಿದ ಸಮಸ್ಯೆಗಳು ಸಮಾಜದಲ್ಲಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ಮನುಷ್ಯನಾಗಿ ಹುಟ್ಟುವುದು ವಿರಳ, ಮನುಷ್ಯನಾಗಿ ಹುಟ್ಟಿದ ನಂತರ ಕವಿಯಾಗುವುದು ವಿರಳ. ಅದರಲ್ಲೂ ಕವಿ ದಾರ್ಶನಿಕವಾಗುವುದು ಅತ್ಯಂತ ವಿರಳ. ಕನದಸಾಸರು ವಿರಳಾತಿ ವಿರಳಲ್ಲಿ ಒಬ್ಬರು. ಸಮಾಜದಲ್ಲಿರುವ ಹಲವು ಸಮಸ್ಯೆಗಳಿಗೆ ಉತ್ತರ ನೀಡುವ ಕಾವ್ಯವನ್ನು ಅವರು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರೊ. ಎನ್. ಭಾರತಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿನೋದ, ಸಹ ಪ್ರಾಧ್ಯಾಪಕಿ ಡಾ.ತ್ರಿವೇಣಿ ಇದ್ದರು