ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಪರದಾಟ

Scramble for water before the start of summer
ಇಳಕಲ್ಲ ನಗರದಲ್ಲಿ ಕೊಳವೆಬಾವಿಯಿಂದ ನೀರು ತುಂಬಿಕೊಳ್ಳುತ್ತಿರುವ ಸಾರ್ವಜನಿಕರು.
Published on

ಇಳಕಲ್ಲ(ಗ್ರಾ): ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ ಕುಡಿಯುವ ನೀರಿಗೆ ದಿನನಿತ್ಯ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದಿನದ 24 ಗಂಟೆಯೂ ನೀರು ಒದಗಿಸುವ ಯೋಜನೆ ಹೆಸರಿಗೆ ಮಾತ್ರ ಸೀಮಿತವಾಗಿದೆ. ನೀರು ಪೂರೈಕೆಯಾಗುತ್ತಿಲ್ಲ. ಕಳೆದ 4 ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದ್ದರಿಂದ ಜನರು ಪರದಾಡುವಂತಾಗಿದೆ.

ರಾತ್ರಿ ಸಮಯದಲ್ಲಿ ನೀರು ಬಿಡುವುದರಿಂದ ಮಹಿಳೆಯರಿಗೆ ತುಂಬಿಕೊಳ್ಳಲು ತೊಂದರೆಯಾಗುತ್ತಿದೆ. ನಗರದ ಪ್ರತಿ ಭಾಗಕ್ಕೂ ಸಮಯ ನಿಗದಿ ಮಾಡಿ. ಆ ಸಮಯಕ್ಕೆ ಸರಿಯಾಗಿ ನೀರು ಬಿಡುವಂತೆ ಕ್ರಮ ಕೈಗೊಳ್ಳಬೇಕು

ಪ್ರಶಾಂತ ಕುಂಬಾರ, ಕೂಡಲಸಂಗಮ ಕಾಲನಿ ನಿವಾಸಿ

ರಾತ್ರಿ 12 ಗಂಟೆ ಅಥವಾ ಬೆಳಗ್ಗೆ 3 ಗಂಟೆಗೆ ನೀರು ಬಿಟ್ಟರೆ ತುಂಬಿಕೊಳ್ಳುವುದಾದರೂ ಹೇಗೆ ಎಂದು ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಬೋರವೆಲ್ ಮೊರೆ: ಸಾರ್ವಜನಿಕರು ತಮ್ಮ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ವಾರ್ಡ್‌ನಲ್ಲಿರುವ ಕೊಳವೆ ಬಾವಿಗಳ ಬಳಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕುಡಿಯುವ ಹಾಗೂ ದಿನನಿತ್ಯದ ಚಟುವಟಿಕೆಗೆ ಬೇಕಾದ ಜಲಕ್ಕೆ ಕೊಳವೆಬಾವಿಯೇ ಆಧಾರವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಬೋರವೆಲ್ ನೀರು ಕುಡಿಯಲು ಯೋಗ್ಯವಿಲ್ಲ. ಅಲ್ಲಿನ ಸಾರ್ವಜನಿಕರ ಪರಿಸ್ಥಿತಿ ಹೇಳತೀರದಾಗಿದೆ.

ಹೆಸರಿಗಷ್ಟೇ ದಿನದ 24 ಗಂಟೆಯೂ ಕುಡಿಯುವ ನೀರು. ಆದರೆ, ನೀರು ಯಾವಾಗ ಬರುತ್ತದೆ ಎಂದು ಕಾದು ಸಾಕಾಗಿದೆ. ವಾರಕ್ಕೆ ಎರಡು ಬಾರಿಯಾದರೂ ನೀರು ಬಿಡಬೇಕು. ಯಂಕವ್ವ, ಕೂಡಲಸಂಗಮ ಕಾಲನಿ ನಿವಾಸಿ

ನಗರದ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಪಾಳು ಬಿದ್ದಿವೆ. ಬೆರಳಣಿಕೆಯಷ್ಟು ಮಾತ್ರ ಚಾಲ್ತಿಯಲ್ಲಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ನಗರದಲ್ಲಿ ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತೀರ ಅಗತ್ಯವಿದ್ದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಶ್ರೀನಿವಾಸ ಜಾಧವ, ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net