ಯೂರಿಯಾ ಗೊಬ್ಬರಕ್ಕಾಗಿ ಪರದಾಟ

Bagepalliyalli Uriya Gobbarakkagi Annadatara paradata
ಬಾಗೇಪಲ್ಲಿ ತಾಲೂಕು ಕಚೇರಿ ಸಮೀಪದ ರಸಗೊಬ್ಯರ ಮಾರಾಟ ಮಳಿಗೆಯ ಮುಂದೆ ಅನ್ನದಾತರು ಯೂರಿಯಾ ಗೊಬ್ಬರಕ್ಕಾಗಿ ಮುಗಿಬಿದ್ದರು.
Published on

ಆಧಾರ್​ ಕಾರ್ಡ್​ ಹಿಡಿದು ಅಂಗಡಿಗಳ ಬಳಿ ಕಾದು ನಿಂತ ರೈತರು

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಈ ಬಾರಿ ತರಕಾರಿಗೆ ಉತ್ತಮ ಬೆಲೆ ದೊರೆತ್ತಿರುವುದರಿಂದ ಬಹುತೇಕ ರೈತರು ತರಕಾರಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬೆಳೆಗೆ ಅಗತ್ಯವಿರುವ ಯೂರಿಯಾ ಸಿಗದೇ ರೈತರು ಪರದಾಡುತ್ತಿದ್ದು, ನಿತ್ಯ ಗೊಬ್ಬರದ ಅಂಗಡಿಗಳ ಮುಂದೆ ಕಾದು ನಿಲ್ಲುವಂತಾಗಿದೆ.
ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿ ಕಾರಣ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ಉತ್ತಮ ತರಕಾರಿ ಬೆಳೆಯಿದ್ದರೂ ಸಮರ್ಪಕ ಬೆಳೆ ಸಿಕ್ಕಿರಲಿಲ್ಲ. ಕೊನೇ ಗಳಿಗೆಯಲ್ಲಿ ಬೆಲೆ ಬಂದರೂ ತೋಟದಲ್ಲಿ ಬೆಳೆ ಬಹುತೇಕ ಮುಗಿದಿದ್ದರಿಂದ ಉತ್ತಮ ಬೆಲೆ ಸಿಗದಂತಾಗಿತ್ತು.
ತಾಲೂಕು ವ್ಯಾಪ್ತಿಯಲ್ಲಿ ಶೇ.70 ಜನ ಕೃಷಿ ಅವಲಂಬಿತರಾಗಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದಿದ್ದರೂ ಬಿದ್ದಂತಹ ಅಲ್ಪ ಪ್ರಮಾಣದ ಮಳೆಗೆ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದಾರೆ. ಈಗ ಬಿತ್ತನೆ ಮಾಡಿರುವ ಜೋಳ ಮತ್ತು ತರಕಾರಿ ಬೆಳೆಗಳಿಗೆ ಅಗತ್ಯವಿರುವ ಯೂರಿಯಾ ಸಕಾಲಕ್ಕೆ ಸಿಗದ ಹಿನ್ನೆಲೆಯಿಂದಾಗಿ ರೈತ ಮಹಿಳೆಯರು ಹಾಗೂ ರೈತರು ಆಧಾರ್​ ಕಾರ್ಡ್​ಗಳನ್ನು ಕೈಯಲ್ಲಿ ಹಿಡಿದು ರಸಗೊಬ್ಬರ ಮಾರಾಟ ಅಂಗಡಿಗಳ ಮುಂಭಾಗದಲ್ಲಿ ಕಾದು ನಿಲ್ಲುವಂತಾಗಿದೆ.
ಕೃಷಿ ಬೆಳೆಗಳ ಬೇಡಿಕೆಗೆ ಅಗತ್ಯವಿರುವ ಯೂರಿಯಾವನ್ನು ನಿಗದಿತ ಸಮಯದಲ್ಲಿ ಸರ್ಕಾರ ಸರಬರಾಜು ಮಾಡದ ಹಿನ್ನೆಲೆ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಯೂರಿಯಾ ದಾಸ್ತಾನು ಇಲ್ಲದಂತಾಗಿದೆ. ಇದರಿಂದ ರೈತರು ಮಾರಾಟ ಕೇಂದ್ರಗಳ ಮುಂಭಾಗದಲ್ಲಿ ನಿಂತು ಅಂಗಡಿ ಮಾಲೀಕರಿಗೆ ಹಿಡಿಶಾಪ ಹಾಕಿ ಬರಿಗೈನಲ್ಲಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸಾಗುತ್ತಿದ್ದಾರೆ.
ರೈತ ಮುಖಂಡ ಜಿ.ಎಂ.ರಾಮಕೃಷ್ಣಪ್ಪ ಮಾತನಾಡಿ, ತಾಲೂಕಿನ ರೈತರು ಕಾಂಪ್ಲೆಕ್ಸ್​ ಮತ್ತು ಯೂರಿಯಾ ರಸಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ರೈತರ ಬೇಡಿಕೆಗೆ ಪೂರಕವಾಗಿ ರಸಗೊಬ್ಬರ ಸರಬರಾಜು ಮಾಡುವ ಜವಾಬ್ದಾರಿ ಹೊತ್ತ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ರೈತರ ಸಮಸ್ಯೆ ಬಗ್ಗೆ ಗಮನಹರಿಸಿ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net