

ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ದಲಿತರಿಗೆ ಮೀಸಲಾಗಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ವಿರೋಧಿಸಿ ಆ.29 ರಂದು ನಗರದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಪುರಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಶೋಷಣೆಗೆ ಒಳಗಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ಸ್ಥಿತಿಗತಿಗಳನ್ನು ಮನಗಂಡು ಕೇಂದ್ರದ ಯೋಜನಾ ಆಯೋಗ ಈ ಸಮುದಾಯಗಳ ಬಲವರ್ಧನೆಗಾಗಿ ಸರ್ಕಾರಗಳು ತಮ್ಮ ವಾರ್ಷಿಕ ಬಜೆಟ್‌ನ ಅಭಿವೃದ್ಧಿಯ ಅನುದಾನದಲ್ಲಿ ಹಣ ಮೀಸಲಿರಿಸಿ ಪರಿಶಿಷ್ಟರ ಸರ್ವತೋಮುಖ ಅಭಿವೃದ್ಧಿಗೆ ಬಳಸಬೇಕೆಂದು ತಿಳಿಸಿದೆ. ಅದರಂತೆ ಈ ಬಾರಿಯ ಜನಸಂಖ್ಯೆ ಶೇ.24ರಷ್ಟಿರುವ ರಾಜ್ಯದ ಪರಿಶಿಷ್ಟರಿಗಾಗಿ ಎಲ್ಲ ಇಲಾಖೆಗಳಲ್ಲಿಯೂ ಶೇ.24.10 ರಷ್ಟನ್ನು ಬಳಸಬೇಕೆಂಬ ನಿಯಮವಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗಾಗಿ ಪರಿಶಿಷ್ಟರಿಗೆ ಮೀಸಲಾಗಿರುವ 11,114 ಕೋಟಿ ರೂ.ಗಳನ್ನು ಬಳಸುತ್ತಿರುವುದು ಸರಿಯಲ್ಲ. ಹೀಗಾಗಿ ಇದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆ.ವಿ.ದೇವೇಂದ್ರ, ಕೆಂಪಯ್ಯನಹುಂಡಿ ರಾಜು, ಸೋಮನಾಯಕ, ಅರಸನಕೆರೆ ಶಿವರಾಜು ಇತರರು ಹಾಜರಿದ್ದರು.