ಎಸ್ಸಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿ ಯೋಜನೆಗೆ ಬೇಡ

dss
ಚಿಕ್ಕಮಗಳೂರಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕ ರೆಡ್ಡಿಗೆ ದಲಿತ ವಿದ್ಯಾರ್ಥಿ ಪರಿಷತ್ ಸದಸ್ಯರು ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕಿ ಸಂಗೀತಾ ಪ್ರಸಾದ್, ಕಾರ್ತೀಕ್, ಸಂಜಯ್, ಕೇಶವ, ಮಧು ಇತರರಿದ್ದರು.
Published on

ಚಿಕ್ಕಮಗಳೂರು: ಎಸ್ಸಿಪಿ, ಟಿಎಸ್ಪಿ ಯೋಜನೆಗಳ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿರುವುದನ್ನು ಕೈಬಿಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಎಡಿಸಿ ನಾರಾಯಣ ಕನಕ ರೆಡ್ಡಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಇದಕ್ಕೆ ಎಲ್ಲಿಂದ ಅನುದಾನ ಕ್ರೋಢೀಕರಿಸಲಾಗುವುದು ಎಂದು ಮಾಹಿತಿ ನೀಡಲಿಲ್ಲ. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿರಿಸಿರುವ ಅನುದಾನ ಬಳಕೆ ಮಾಡುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ 11 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿರುವುದನ್ನು ಬೇರೆಡೆ ಬಳಸದೆ ಜನಾಂಗದ ಶ್ರೇಯೋಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ಪಾವತಿ ಮಾಡದೆ ವಂಚಿಸಿದೆ. ಹಿಂದಿನ ಸರ್ಕಾರದ ಹಾದಿಯನ್ನೇ ಈ ಸರ್ಕಾರವೂ ಅನುರಿಸುತ್ತಿದೆ ಎಂದು ದೂರಿದರು.
ಜಿಲ್ಲಾ ಸಂಚಾಲಕಿ ಸಂಗೀತಾ ಪ್ರಸಾದ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 11 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಖಂಡನೀಯ. ಈ ನಿರ್ಧಾರವನ್ನು ಸರ್ಕಾರ ಕೈಬಿಟ್ಟು ಸಮುದಾಯದ ಏಳಿಗೆಗೆ ಉಪಯೋಗಿಸಬೇಕು ಎಂದು ಮನವಿ ಮಾಡಿದರು.
ದಲಿತ ವಿದ್ಯಾರ್ಥಿ ಪರಿಷತ್ ಸದಸ್ಯರಾದ ಕಾರ್ತೀಕ್, ಕುಮಾರ್, ಸಂಜಯ್, ಶರತ್, ಕೇಶವ, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net