ನಾಯಕತ್ವ ರೂಪಿಸುವಲ್ಲಿ ಸ್ಕೌಟ್ಸ್​, ಗೈಡ್ಸ್​ ಮುಂದು

kolar
Published on

ಕೋಲಾರ: ಪೂರ್ವ ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ವಿವಿಧ ಹಂತಗಳಲ್ಲಿ ಸ್ಕೌಟ್ಸ್​ ಮತ್ತು -ಗೈಡ್ಸ್​ ಶಿಕ್ಷಣ ರೂಪಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸುವ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ರಾಜ್ಯ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಮುಖ್ಯ ಆಯುಕ್ತ ಪಿ.ಜಿ.ಆರ್​.ಸಿಂಧ್ಯಾ ಹೇಳಿದರು.

ನಗರದ ಸ್ಕೌಟ್​ ಭವನದಲ್ಲಿ ಶನಿವಾರ ಭಾರತ್​ ಸ್ಕೌಟ್ಸ್​ ಮತ್ತು -ಗೈಡ್ಸ್​ ಸಂಸ್ಥೆಯ ಜಿಲ್ಲಾ ಸಂಸ್ಥೆ ಮತ್ತು ಸ್ಥಳಿಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ ಬಿತ್ತುತ್ತಿದೆ. ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಭಾಗವಹಿಸುವ ಮೂಲಕ ಶಾಲಾ ಮಕ್ಕಳಲ್ಲಿ ನಾಯಕತ್ವ ಗುಣಗಳು, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರವೃತ್ತಿ, ಜೀವನ ಕೌಶಲಗಳನ್ನು ಕಲಿತು ಮುಂದಿನ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ. ಆದ್ದರಿಂದ ಎಲ್ಲ ಹಂತದ ಅಧಿಕಾರಿಗಳು, ಪಾಲಕರು ಮತ್ತು ಶಿಕ್ಷಕರು ಸ್ಕೌಟ್ಸ್​- ಮತ್ತು ಗೈಡ್ಸ್​ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸಬೇಕು ಎಂದು ತಿಳಿಸಿದರು.

ತರಬೇತಿ ಪಡೆದುಕೊಂಡಿರುವ ಶಿಕ್ಷಕರು ಪ್ರತಿವರ್ಷ ಕನಿಷ್ಠ ಇಬ್ಬರು ಹೊಸ ಶಿಕ್ಷಕರನ್ನು ಅಥವಾ ಸ್ವಯಂ ಸೇವಕರನ್ನು ಸಂಸ್ಥೆಗೆ ಪರಿಚಯ ಮಾಡಿಸಬೇಕು. ಪ್ರತಿವಾರ ಅರ್ಧ ಗಂಟೆ ಸಂಸ್ಥೆಯ ಶಿಕ್ಷಣವನ್ನು ತಿಳಿಸುವಲ್ಲಿ ಶ್ರಮ ವಹಿಸಿದರೆ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.

ಪ್ರತಿ ಸಂಸ್ಥೆಯಲ್ಲಿ ಮೂಲ ತರಬೇತಿಗಳನ್ನು ನಡೆಸುವ ಮೂಲಕ ಹೆಚ್ಚು ಜನರನ್ನು ತರಬೇತಿಗೊಳಿಸಿ ನಮ್ಮ ಸಂಸ್ಥೆಯ ಆಶಯಗಳನ್ನು ಚಳವಳಿಯ ರೂಪದಲ್ಲಿ ಹರಡಬೇಕಿದೆ, ಪದಾಧಿಕಾರಿಗಳು ದಾನಿಗಳನ್ನು ಪಟ್ಟಿಮಾಡಿ ಅವರಿಂದ ವಸ್ತುಗಳ ರೂಪದಲ್ಲಿ ದಾನ ಪಡೆದು ಶಿಬಿರಗಳನ್ನು ಹಮ್ಮಿಕೊಂಡಾಗ ಮಕ್ಕಳಲ್ಲಿ ಬದಲಾವಣೆ ಸಾಧ್ಯ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ರಾಜ್ಯ ತರಬೇತಿ ಆಯುಕ್ತೆ ಶ್ಯಾಮಲಾ, ಜಿಲ್ಲಾ ಅಧ್ಯಕ್ಷ ಬಿಸಪ್ಪಗೌಡ, ಸ್ಕೌಟ್​ ಆಯುಕ್ತ ಕೆ.ಆರ್​. ಸುರೇಶ್​, ಉಪಾಧ್ಯಕ್ಷ ಡಾ.ಚಂದ್ರಶೇಖರ್​, ಆಯುಕ್ತೆ ನವೀನಾ, ವಡಗೂರು ನಾಗರಾಜ್​, ಚೌಡೇಶ್ವರಿ ರಾಮು, ನೋಡಲ್​ ಅಧಿಕಾರಿ ಸಿ.ಆರ್​.ಅಶೋಕ್​, ಸ್ಥಾನಿಕ ಆಯುಕ್ತ ಶಂಕರ್​, ರಮೇಶ್​ ನಾಯಕ್​, ಖಚಾಂಚಿ ಉಮೇಶ್​, ಕಾರ್ಯದರ್ಶಿ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ವಿ.ಬಾಬು, ತರಬೇತಿ ಆಯುಕ್ತರಾದ ಮುನಿನಾರಾಯಣಪ್ಪ, ಗೌರಬಾಯಿ ಉಪಸ್ಥಿತರಿದ್ದರು.

ಪಾಲಕರ ಸಹಭಾಗಿತ್ವ ಅಗತ್ಯ

ಶಿಕ್ಷಕರು ಮನಸ್ಸು ಮಾಡಿದರೆ ಮಾತ್ರ ಸ್ಕೌಟ್ಸ್​ ಮತ್ತು -ಗೈಡ್ಸ್​ ಚಳುವಳಿ ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯ. ಸಮಾಜದ ಉಳಿವಿಗೆ ಇಂದಿನಿಂದಲೇ ವಿದ್ಯಾರ್ಥಿಗಳಲ್ಲಿ ಸೇವಾ ಮೌಲ್ಯಗಳು ಬೆಳೆಯಲು ಸ್ಕೌಟ್ಸ್​-ಗೈಡ್ಸ್​ ಶಿಕ್ಷಣ ಸಹಕಾರಿಯಾಗಲಿದೆ ಎಂದು ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು. ಮುಂದಿನ ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಇಲ್ಲಿ ಗಳಿಸಿದ ಪ್ರಮಾಣ ಪತ್ರಗಳು ಸಹಾಯಕ್ಕೆ ಬರಲಿದ್ದು ಎಲ್ಲ ಪಾಲಕರು ಈ ಶಿಕ್ಷಣದಲ್ಲಿ ಭಾಗವಹಿಸಲು ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net