

ಆನೇಕಲ್: ಮಕ್ಕಳಲ್ಲಿ ಶಿಸ್ತು ಮತ್ತು ಶ್ರದ್ಧಾ ಮನೋಭಾವ ಬೆಳಸಲು ಸ್ಕೌಟ್ಸ್ ಮತ್ತು ಗೈಡ್ಸ್ ನಿರಂತರ ಶ್ರಮಿಸುತ್ತಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನುಡಿದರು.
ಪಟ್ಟಣದ ಶ್ರೀರಾಮ ಕುಟೀರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬೆಂಗಳೂರು ಪೂರ್ವ ಜಿಲ್ಲಾ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಕೌಟ್-ಗೈಡ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ತರಗತಿಗಳಲ್ಲಿನ ಪಾಠಕ್ಕಿಂತ ಸಮಾಜ ಕಲಿಸುವ ಜೀವನದ ಪಾಠ ಮುಖ್ಯ. ಅದು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಕಲಿಯಲು ದೊರೆಯುತ್ತದೆ. ಸಂಸ್ಕೃತಿ, ಪರಂಪರೆ ಮತ್ತು ಜನಪದ ಸೊಗಡಿನ ಬಗ್ಗೆ ತಿಳಿಸುವಲ್ಲಿ ಮೇಳಗಳು ಉಪಯುಕ್ತವಾಗಿವೆ ಎಂದರು.
ಮಾಜಿ ಸಚಿವರೂ ಆದ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಪ್ರಧಾನಿ ಮೋದಿ ಆಶಯದಂತೆ ಭಾರತ ಕೇವಲ ಭರತ ಖಂಡದಲ್ಲಷ್ಟೇ ಅಲ್ಲ, ಇಡೀ ಪ್ರಪಂಚಕ್ಕೇ ವಿಶ್ವಗುರು ಆಗಬೇಕು. ಆ ನಿಟ್ಟಿನಲ್ಲಿ ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳಾಗಿ ರಾಷ್ಟ್ರವು ಕಪಟ ಮತ್ತು ಕಲ್ಮಶವಾಗದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಮಕ್ಕಳೂ ಸಹ ಜವಾಬ್ದಾರಿಯುತ ಹಾಗೂ ಸಮಾಜಮುಖಿ ಚಿಂತಕರಾಗಿ ರಾಷ್ಟ್ರ ಪ್ರಗತಿ ಹೊಂದಲು ತಮ್ಮ ಕೈಲಾದ ಸೇವೆಗೈದು ಅವರು ಶಿಸ್ತು ಮೈಗೂಡಿಸಿಕೊಳ್ಳುವಂತೆ ಮಾಡುವ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡುತ್ತಿದೆ ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಕ ರಾಜಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ನ ಪದಾಧಿಕಾರಿಗಳಾದ ಸಿ.ಲಕ್ಷ್ಮೀಕಾಂತರಾಜು, ಆರ್.ಸುಮಾ, ಮುನಿಕೃಷ್ಣಪ್ಪ, ಆರ್.ಮುನಿರಾಜು, ಆರ್.ಎಲ್. ನಾರಾಯಣಸ್ವಾಮಿ, ಎಂ.ನಟೇಶ್, ಮಂಜೇಗೌಡ, ಬಿ.ಎಸ್.ಪದ್ಮಜಾ, ಎ.ಎಂ.ರಾಜಶೇಖರ್, ರಾಮಕೃಷ್ಣಯ್ಯ, ಎ.ಎನ್.ಪ್ರಭಾವತಿ, ಮನು ಇದ್ದರು.
ವಿವಿಧ ಸ್ಪರ್ಧೆಗಳ ರಂಗು: ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್‌ಗಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವುದು, ಮಣ್ಣಿನ ಮಾದರಿ ತಯಾರಿಕೆ, ತರಕಾರಿಗಳಲ್ಲಿ ಕಲಾಕೃತಿ, ಎಲೆಗಳಲ್ಲಿ ಆಕೃತಿ ಮತ್ತು ಚಿತ್ರ ಬಿಡಿಸುವುದು, ಗಾಳಿಪಟ ಹಾರಿಸುವುದು, ರಂಗೋಲಿ ಸ್ಪರ್ಧೆ, ಕರಕುಶಲ ವಸ್ತುಗಳ ತಯಾರಿಕೆ, ಮೆಹಂದಿ ಹಾಕುವುದು, ಛದ್ಮವೇಷ ಸೇರಿ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು ಎಂದು ಜಿಲ್ಲಾ ಕಾರ್ಯದರ್ಶಿ ಎ.ಎನ್.ನರೇಂದ್ರ ಕುಮಾರ್ ಹೇಳಿದರು.