

ಮಂಗಳೂರು: ವಿದ್ಯಾರ್ಥಿಗಳು ಅನುಭವದ ಮೂಲಕ ಉತ್ತಮ ಪಾಠ ಕಲಿಯಬೇಕಿದ್ದು, ಜಾಂಬೂರಿ ಇದಕ್ಕೊಂದು ಅತ್ಯುನ್ನತ ಅವಕಾಶ ಎಂದು ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 1ರಿಂದ 12ರವರೆಗೆ ನಡೆಯುವ ವಿಶ್ವ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಂಗಳೂರಿನ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
24ನೇ ವಿಶ್ವ ಜಾಂಬೂರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯಲ್ಲಿ ಸಾಂಸ್ಕೃತಿಕ ಜಾಂಬೂರಿಯಾಗಿ ಅದ್ದೂರಿಯಿಂದ ನಡೆಸಿತ್ತು. ಆಳ್ವಾಸ್‌ನಲ್ಲಿ ಜರುಗಿದ್ದ ಜಾಂಬೂರಿಯಲ್ಲಿ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. ಜಾಂಬೂರಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದು, ತಮ್ಮ ಅನುಭವದಿಂದ ಉತ್ತಮ ಪಾಠ ಕಲಿಯಬೇಕು. ಶಿಸ್ತು, ಸೇವಾ ಮನೋಭಾವ ಹಾಗೂ ಸ್ನೇಹ, ಸೌಹಾರ್ದ ಭಾವ ರೂಢಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ವಸಂತ್ ರಾವ್, ಜಿಲ್ಲಾ ಸಂಘಟನಾ ಆಯುಕ್ತೆ ಸುನೀತಾ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ಹಿರಿಯ ಗೈಡ್ಸ್ ಶುಭಾ ವಿಶ್ವನಾಥ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶುಭಾ ವಿಶ್ವನಾಥ್ ಮತ್ತು ಸಂಧ್ಯಾ ಉಪಸ್ಥಿತರಿದ್ದರು. ಜಿಲ್ಲಾ ಗೈಡ್ಸ್ ಆಯುಕ್ತೆ ಮತ್ತು ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಕಜೆ ವಂದಿಸಿದರು, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡದಿಂದ 58 ಜನ
ದಕ್ಷಿಣ ಕೊರಿಯಾದಲ್ಲಿ ನಡೆಯುವ 25ನೇ ವಿಶ್ವ ಜಾಂಬೂರಿಯಲ್ಲಿ 153 ದೇಶಗಳ 50 ಸಾವಿರ ಶಿಬಿರಾರ್ಥಿಗಳು ಭಾಗಿಯಾಗಲಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 58 ಶಿಬಿರಾರ್ಥಿಗಳು (28 ಸ್ಕೌಟ್ಸ್, 18 ಗೈಡ್ಸ್, 5 ಶಿಕ್ಷಕರು, 7 ಐಎಸ್‌ಟಿ) ಸೇರಿದಂತೆ ರಾಜ್ಯದ 124 ಹಾಗೂ ದೇಶದ 380 ಶಿಬಿರಾರ್ಥಿಗಳು ಪಾಲ್ಗೊಳ್ಳುವರು ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.