ವಿಶ್ವಶಾಂತಿಗಾಗಿ ಸ್ಕೌಟ್ಸ್-ಗೈಡ್ಸ್ ಸಂಕಲ್ಪ

mng-11 nov scouts-guides
ಸೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಡೆದ ಜಿಲ್ಲಾ ತರಬೇತಿ ಕೇಂದ್ರದ ನೂತನ ಸಭಾಭವನದ ಸಾಂಕೇತಿಕ ಉದ್ಘಾಟನೆ ಹಾಗೂ ಶತಮಾನೋತ್ಸದ ಕಾರ್ಯಕ್ರಮಗಳಿಗೆ ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಚಾಲನೆ ನೀಡಿರು.
Published on

ಮಂಗಳೂರು: ಯುವಜನತೆಯಲ್ಲಿ ಭೌದ್ಧಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಜವಾಬ್ದಾರಿಯನ್ನು ಬೆಳೆಸುವುದು ಸ್ಕೌಟ್ಸ್-ಗೈಡ್ಸ್ ಸಂಘಟನೆಯ ಮೂಲ ಉದ್ದೇಶವಾಗಿದ್ದು, ವಿಶ್ವಶಾಂತಿಯೇ ಸ್ಕೌಟ್ಸ್-ಗೈಡ್ಸ್‌ನ ಮೂಲ ಸಂಕಲ್ಪ ಎಂದು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಹೇಳಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಡೆದ ಜಿಲ್ಲಾ ತರಬೇತಿ ಕೇಂದ್ರ ಪಿಲಿಕುಳದ ನೂತನ ಸಭಾಭವನದ ಸಾಂಕೇತಿಕ ಉದ್ಘಾಟನೆ ಹಾಗೂ ಶತಮಾನೋತ್ಸದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಯುವಸಮೂಹ ದೇಶದ ಶಕ್ತಿ. ಹೀಗಾಗಿ ಸ್ಕೌಟ್ಸ್-ಗೈಡ್ಸ್‌ನ ಉದ್ದೇಶದೊಂದಿಗೆ ಯುವಕರು ದೇಶ ಹಿತ ಕಾಪಾಡುವಲ್ಲಿ ತೊಡಗಿಸಿಕೊಳ್ಳಬೇಕು. ಸ್ಕೌಟ್ಸ್-ಗೈಡ್ಸ್ ಚಿಂತನೆಯ ವಿದ್ಯಾರ್ಥಿಗಳನ್ನು ಸಮಗ್ರವಾಗಿ ರೂಪುಗೊಳಿಸುತ್ತಿದೆ. ಸ್ಕೌಟ್ಸ್-ಗೈಡ್ಸ್ ಜಾಂಬೂರಿ ಆಯೋಜನೆ ಮೂಲಕ ಮೂಡುಬಿದಿರೆಯಲ್ಲಿ ಮಿನಿವಿಶ್ವದ ದರ್ಶನವಾಗಿದ್ದು, ಪ್ರಪಂಚವೇ ದ.ಕ ಜಿಲ್ಲೆಯತ್ತ ಅಚ್ಚರಿಯಿಂದ ನೋಡಿದೆ. ದೇಶ ಯುವಜನತೆಯಿಂದ ಸಾಕಷ್ಟು ಕೊಡುಗೆ ನಿರೀಕ್ಷಿಸುತ್ತಿದೆ. ಸ್ಕೌಟ್ಸ್-ಗೈಡ್ಸ್ ಜಾತಿ, ಧರ್ಮವನ್ನು ಮೀರಿದ ಸಂಘಟನೆಯಾಗಿದ್ದು, ದೇಶ ಮೊದಲು ಎಂಬ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್‌ನ ದ. ಕ ಜಿಲ್ಲಾ ಮುಖ್ಯ ಆಯುಕ್ತ ಡಾ.ಮೋಹನ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ್ಯ ಶಿಕ್ಷಣದ ಜೊತೆ ಜೊತೆಯಾಗಿ ಸೇವಾ ಮನೋಭಾವನೆಯು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ. ಇದಕ್ಕೆ ಪೂರಕವಾಗಿ ಭಾರತ ಸ್ಕೌಟ್ಸ್-ಗೈಡ್ಸ್‌ನ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಸ್ಕೌಟ್ಸ್-ಗೈಡ್ಸ್ ಎಂಬುದು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಆಂದೋಲನ, 150 ವರ್ಷಗಳ ಹಿಂದೆ ಭಾರತಕ್ಕೆ ಬಂದ ಈ ಸ್ಕೌಟ್ಸ್-ಗೈಡ್ಸ್ ಇಂದು ವಿದ್ಯಾರ್ಥಿ ಸೇವಾ ವಲಯವನ್ನು ವಿಶಾಲವಾಗಿ ವೃದ್ಧಿಸಿದೆ. ಇಂದು ಜಗತ್ತಿನ 197 ರಾಷ್ಟ್ರಗಳಲ್ಲಿ ಸ್ಕೌಟ್ಸ್-ಗೈಡ್ಸ್ ಆಂದೋಲನ ಇದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸುವ ಮಹತ್ಕಾರ್ಯವನ್ನು ಈ ಸ್ಕೌಟ್ಸ್-ಗೈಡ್ಸ್ ನಿರಂತರವಾಗಿ ಮಾಡುತ್ತಾ ಬಂದಿರುವುದು ವಿಶೇಷ ಎಂದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಮಹೇಶ್, ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಮಾಜಿ ಎಂಎಲ್ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸೌಟ್ಸ್ ಮತ್ತು ಗೈಡ್ಸ್ ಉಡುಪಿ ಆಯುಕ್ತ ಜಯಕರ ಶೆಟ್ಟಿ, ಹಿರಿಯರಾದ ಫಾದರ್ ಗೊಮ್ಸ್, ಉಡುಪಿ ಜಿಲ್ಲಾ ಗೈಡ್ ಆಯುಕ್ತರಾದ ಜ್ಯೋತಿ ಜಿ ಪೈ, ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ, ಪ್ರಮುಖರಾದ ಸುಕುಮಾರ್, ಮುಸ್ತಾಫ, ಬಾಬು ಮ್ಯಾಥ್ಯು, ಕೆ.ವಿ ರಾವ್ ಸಹಿತ ಹಲವರಿದ್ದರು.

ಶತಮಾನೋತ್ಸದ ಕಾರ್ಯಕ್ರಮದ ಅಂಗವಾಗಿ ಸೇವಾ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ನವೀನ್ ಅಂಬೂರಿ ಸ್ವಾಗತಿಸಿದರು, ಪ್ರದೀಪ್ ಕುಮಾರ್ ವಂದಿಸಿದರು.

-------------

ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಸಾಂಸ್ಕೃತಿಕ ಜಾಂಬೂರಿ ದ.ಕ ಜಿಲ್ಲೆಯಲ್ಲಿ ನಡೆದಿದ್ದು, 63000 ವಿದ್ಯಾರ್ಥಿಗಳು, 2,000ಕ್ಕೂ ಅಧಿಕ ಶಿಕ್ಷಕರು, 25 ಸಾವಿರಕ್ಕೂ ಅಧಿಕ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 51 ಕೋಟಿ ವಿದ್ಯಾರ್ಥಿ ಯುವ ಸಮುದಾಯ ಹೊಂದಿರುವ ಭಾರತದಲ್ಲಿ ಸ್ಕೌಟ್ಸ್-ಗೈಡ್ಸ್‌ನ ಧ್ಯೇಯೋದ್ದೇಶಗಳು ಎಲ್ಲರನ್ನು ತಲುಪಬೇಕಾಗಿದೆ.

- ಡಾ.ಮೋಹನ್ ಆಳ್ವ, ಮುಖ್ಯ ಆಯುಕ್ತರು

ಭಾರತ ಸ್ಕೌಟ್ ಅಂಡ್ ಗೈಡ್ ನ ದ. ಕ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net