

ಮಂಗಳೂರು: ದೇಶದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಸೀ ಸ್ಕೌಟ್ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹೇಳಿದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಇದರ ದ.ಕ.ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಕಳೆದ ವರ್ಷ ಮೂಡುಬಿದಿರೆಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಜಾಂಬೂರಿ ನೆನಪಿಗಾಗಿ ಪಿಲಿಕುಳದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಏರ್ ಸ್ಕೌಟ್ ತರಬೇತಿ ಆರಂಭಗೊಂಡಿದೆ. ಕಳೆದ ಅಕ್ಟೋಬರ್‌ನಿಂದ ದೇಶದ 100 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಮುಂಬೈಯಿಂದ ಇದಕ್ಕೆ ತರಬೇತಿದಾರರನ್ನು ಕರೆ ತರಲಾಗಿದೆ. ಅದೇ ರೀತಿ ಮಂಗಳೂರಿನಲ್ಲಿ ಸೀ ಸ್ಕೌಟ್ ತರಬೇತಿಗೂ ದೇಶದ ವಿವಿಧ ಕಡೆಗಳಿಂದ ನುರಿತ ತರಬೇತಿದಾರರನ್ನು ಕರೆ ತಂದು ತರಬೇತಿ ನೀಡಲಾಗುವುದು. ಜತೆಗೆ ರೂರಲ್ ಸ್ಕೌಟ್ ತರಬೇತಿಯೂ ನೀಡಲಾಗುತ್ತದೆ ಎಂದರು.
ಸ್ಕೌಟ್-ಗೈಡ್‌ಗಳು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯ ತೊಡಗಿಸಿಕೊಂಡಿರುತ್ತಾರೆ. ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುವ ತರಬೇತಿ ಸ್ಕೌಟ್-ಗೈಡ್‌ಗಳಿಗೆ ಇದೆ. ರಾಜ್ಯದಲ್ಲಿ 2 ಕೋಟಿ ಸ್ಕೌಟ್ ಮಕ್ಕಳು ಇದ್ದು, ಸುಮಾರು 10 ಲಕ್ಷ ಮಕ್ಕಳು ವಿವಿಧ ತರಬೇತಿ ಪಡೆಯುತ್ತಿದ್ದಾರೆ. ಉಳಿದಂತೆ 1.90 ಕೋಟಿ ಮಕ್ಕಳಿಗೆ ಯಾವುದೇ ಹೆಚ್ಚಿನ ತರಬೇತಿ ಇಲ್ಲದಿದ್ದರೂ ಅವರೆಲ್ಲ ಒಂದಲ್ಲೊಂದು ಸಾಂಸ್ಕೃತಿಕ ತರಬೇತಿ ಪಡೆಯುತ್ತಿರುತ್ತಾರೆ. ಸ್ಕೌಟ್ ಸಮವಸ್ತ್ರ ಧರಿಸಿದರೆ ಮಾತ್ರ ಸಾಲದು, ಗುಣದಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಪಿಲಿಕುಳದಲ್ಲಿ ಸುಸಜ್ಜಿತ ಸ್ಕೌಟ್-ಗೈಡ್ ಭವನ ನಿರ್ಮಾಣ ಆಗಬೇಕು, ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯಬೇಕು. ಬೆಳ್ತಂಗಡಿ, ಬಂಟ್ವಾಳಗಳಲ್ಲೂ ಸ್ಕೌಟ್ ಭವನ ನಿರ್ಮಾಣ ಆಗಬೇಕಾಗಿದೆ ಎಂದರು.
ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ದ.ಕ. ಸಂಸದ, ಸಂಸದ ನಿಧಿಯಲ್ಲಿ 15 ಲಕ್ಷ ರೂ. ಮೊತ್ತವನ್ನು ಸ್ಕೌಟ್ ಭವನ ವಿಸ್ತರಣೆಯ ಚಟುವಟಿಕೆಗೆ ಕೂಡಲೇ ಬಿಡುಗಡೆ ಮಾಡುವುದಾಗಿ ಹೇಳಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡುಶೆಡ್ಡೆ ಪಂಚಾಯಿತಿ ಬಳಿಯಿಂದ ಪರಾರಿ ಮೂಲಕ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಗುರುಪುರ ಕೈಕಂಬ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮರವೂರು ಹಾಗೂ ವಿಮಾನ ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿ 25 ಲಕ್ಷ ರೂ. ಮೊತ್ತವನ್ನು ಸ್ಕೌಟ್ ಭವನ ಚಟುವಟಿಕೆಗೆ ಮಂಜೂರುಗೊಳಿಸುವುದಾಗಿ ಹೇಳಿದರು.
ಮೂಡುಶೆಡ್ಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅನಿಲ್ ಕುಮಾರ್, ಅದಾನಿ ಕಂಪನಿಯ ಮುಖ್ಯಸ್ಥ ಕಿಶೋರ್ ಆಳ್ವ, ಬರೋಡ ಉದ್ಯಮಿ ಶಶಿಧರ ಶೆಟ್ಟಿ, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್, ಸ್ಕೌಟ್ಸ್ ಗೈಡ್ಸ್ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಸ್ಕೌಟ್ ಗೈಡ್ಸ್ ರಾಜ್ಯ ಆಯುಕ್ತೆ ರಾಮಲತಾ, ಜಿಲ್ಲಾ ಆಯುಕ್ತೆ ರಾಧಾ ವೆಂಕಟರಮಣ, ಹಿರಿಯ ಅಧಿಕಾರಿ ಪ್ರಭಾಕರ ಭಟ್ ಇದ್ದರು. ನವೀನ್‌ಚಂದ್ರ ನಿರೂಪಿಸಿದರು.
ಪಿಲಿಕುಳದಲ್ಲಿ ಇನ್ನೊಂದು ಸ್ಕೌಟ್ ಭವನ ಶೀಘ್ರ
ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ 30 ಕೋಟಿ ರೂ. ವೆಚ್ಚವಾಗಿದ್ದು, ಅದರಲ್ಲೇ ಉಳಿಕೆ 1 ಕೋಟಿ ರೂ. ಮೊತ್ತ ಸೇರಿಸಿ ಈ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದು ಬಾಲಕರಿಗಾಗಿದ್ದು, ಬಾಲಕಿಯರಿಗೆ ಇದರ ಪಕ್ಕದಲ್ಲೇ 1 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ಇನ್ನೊಂದು ವಿಶಾಲ
ಕಟ್ಟಡ ಶೀಘ್ರ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೆ ಇಲ್ಲಿ ಆ್ಯಂಪಿ ಥಿಯೇಟರ್, ಓಪನ್ ಥಿಯೇಟರ್ ಕೂಡ ನಿರ್ಮಿಸಲಾಗುವುದು ಎಂದು ಸ್ಕೌಟ್-ಗೈಡ್ಸ್ ದ.ಕ.ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕದಲ್ಲಿ ತಿಳಿಸಿದರು.