

ಹಾಸನ: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಯುವಕರಲ್ಲಿ ಸದ್ಭಾವನೆ, ಸಚ್ಚಾರಿತ್ರೃ ಹಾಗೂ ಧನಾತ್ಮಕ ಮೌಲ್ಯಗಳ ಜತೆಗೆ ಕಾಯಕದ ಮಹತ್ವ ತಿಳಿಸಿಕೊಡುವ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಉತ್ತಮ ಹೆಸರು ಪಡೆದಿದೆ ಎಂದು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥಾಪಕ ರಾಬರ್ಟ್ ಬೇಡನ್ ಪೊವೆಲ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಈ ಸಂಸ್ಥೆಯು ಯುವ ಜನತೆಯಲ್ಲಿ ದೇಶ ಪ್ರೇಮ, ಶ್ರದ್ಧೆ, ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸುವ ಗುಣವನ್ನು ಕಲಿಸುವುದರ ಜತೆಗೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲಿದೆ ಎಂದರು.
ಗೈಡ್ಸ್ ವಿಭಾಗದ ಜಿಲ್ಲಾ ಮುಖ್ಯಸ್ಥೆ ಪದ್ಮಮ್ಮ ಮಾತನಾಡಿ, ಸಂಸ್ಥೆಗೆ ಶತಮಾನಗಳ ಇತಿಹಾಸವಿದ್ದು, ಭಾರತದಲ್ಲಿ ಅನೇಕ ಕಡೆ ಸ್ಕೌಟ್ಸ್ ಚಳವಳಿ ಬೇರೆ ಬೇರೆ ಹೆಸರಿನಲ್ಲಿ ಪ್ರತ್ಯೇಕವಾಗಿ ಆರಂಭವಾಯಿತು. ಬೇಡನ್ ಪೊವೆಲ್ ಭಾರತಕ್ಕೆ ಬಂದಾಗ ಎಲ್ಲವನ್ನು ಒಟ್ಟು ಸೇರಿಸಲು ಪ್ರಯತ್ನಿಸಿದ್ದರು ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲ ವಿಕ್ರಮ್‌ದೇವ್ ಪ್ರಭು ಮಾತನಾಡಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಇದು ವಿದ್ಯಾರ್ಥಿಗಳಲ್ಲಿನ ಕೌಶಲಗಳನ್ನು ಹೊರಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.