ಮೈಸೂರು: ಶ್ರೀಕ್ಷೇತ್ರ ಸುತ್ತೂರಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ, ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದ ವತಿಯಿಂದ ಜೆಎಸ್‌ಎಸ್ ಶಾಲೆಗಳ ಶಿಕ್ಷಕ-ಶಿಕ್ಷಕಿಯರಿಗೆ ಏಳು ದಿನಗಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಪಿ. ವಿಶ್ವನಾಥ್ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸೇವಾ ಮನೋ ಭಾವನೆ ಕಲಿತು ಮಕ್ಕಳಲ್ಲಿ ಬೆಳೆಸಬೇಕು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕು. ಹಿರಿಯರಿಗೆ ಹೇಗೆ ಗೌರವ ಕೊಡಬೇಕು, ಸಮಾಜದೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ಈ ಸಂಸ್ಥೆಯ ಆಸ್ತಿಯೇ ನೈತಿಕ ಶಿಕ್ಷಣ. ದೇಶಾಭಿಮಾನವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಬೇಕು. ನೀವು ಇಲ್ಲಿ ಕಲಿತು ನಿಮ್ಮ ಶಾಲೆಗಳಲ್ಲಿ ಶಾಖೆಯನ್ನು ತೆರೆದು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ. ರಾಜಶೇಖರ್ ಮಾತನಾಡಿ, ಸುತ್ತೂರು ಶ್ರೀಗಳ ಆಶಯದಂತೆ ಜೆಎಸ್‌ಎಸ್‌ನ ಎಲ್ಲ ಶಾಲೆಗಳಲ್ಲಿ ಸ್ಕೌಟ್ ಮತ್ತು ಗೈಡ್ ವಿಭಾಗಗಳನ್ನು ತೆರೆದು ಮಕ್ಕಳಿಗೆ ಸಂಘಟನೆ, ಶಿಸ್ತು, ಸೇವಾ ಮನೋಭಾವನೆ ಕಲಿಸಬೇಕು. ಶಿಕ್ಷಕರು ಇದನ್ನು ಒತ್ತಡ ಎಂದು ಭಾವಿಸದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಮಾತನಾಡಿ, ನಿಮ್ಮೆಲ್ಲರನ್ನು ಶಿಸ್ತಿನ ಸಿಪಾಯಿಗಳಂತೆ ಇರುವುದನ್ನು ನೋಡುತ್ತಿರುವುದು ತುಂಬಾ ಸಂತೋಷವಾಯಿತು. ಇಲ್ಲಿ ನೀವು ತರಬೇತಿಯನ್ನು ಪಡೆದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಸುತ್ತೂರು ಜೆಎಸ್‌ಎಸ್ ಸಂಸ್ಥೆಯ ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಖಜಾಂಚಿ ಕೆ.ಬಿ. ಗುರುಮೂರ್ತಿ ಹಾಗೂ ಇತರರು ಇದ್ದರು.