

ಮಂಡ್ಯ: ಜಿಲ್ಲೆಯಲ್ಲಿರುವ ಸರ್ಕಾರಿ, ಖಾಸಗಿ, ವಸತಿ ಶಾಲೆಗಳಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಯೂನಿಟ್ ಪ್ರಾರಂಭಿಸುವುದರ ಜತೆಗೆ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿಯಿಂದ ಮಕ್ಕಳಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸುತ್ತದೆ. ಪಾಲಕರು ತಮ್ಮ ಮಕ್ಕಳನ್ನು ಯೂನಿಟ್‌ಗೆ ಸೇರಿಸಿ ತರಬೇತಿ ಕೊಡಿಸಿ ಎಂದು ಹೇಳಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ಗೆ ಸೇರಿದರೆ ಆಗುವ ಅನುಕೂಲತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿ. ಇದರೊಂದಿಗೆ ನೋಂದಣಿಯಾಗುವಂತೆ ಪ್ರೆರೇಪಿಸಬೇಕು. ಶಾಲೆಯಲ್ಲಿ ಹೆಚ್ಚು ಪ್ರದರ್ಶನ ಏರ್ಪಡಿಸಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡಿಸಬೇಕು. ಇದರ ಜತೆಗೆ ಶಿಕ್ಷಕರು ಕೂಡ ಭಾಗಿಯಾಗಬೇಕು. ವಸತಿ ಶಾಲೆಗಳಲ್ಲಿ ಯೂನಿಟ್ ಆರಂಭಿಸಬೇಕು. ಮಕ್ಕಳೇ ದೇಶದ ಮುಂದಿನ ಆಸ್ತಿ. ಅವರಿಂದ ದೇಶಕ್ಕೆ ಒಳಿತಾಗಬೇಕು ಎಂದರೆ ಶಿಸ್ತು, ಮೌಲ್ಯಯುತ ಮತ್ತು ಸಮಾಜಮುಖಿ ಕೆಲಸಗಳನ್ನು ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಅಥವಾ ಸಮಾಜ ವಿಜ್ಞಾನದ ಶಿಕ್ಷಕರಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೊಡಿಸಿ. ಅವರ ಮೂಲಕ ಮಕ್ಕಳಿಗೆ ಇದರ ಅರಿವು ಮೂಡಿಸಬೇಕು. ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಲ್ಲಿ ಹೆಚ್ಚು ಭಾಗವಹಿಸುವುದರಿಂದ ಇಂಜಿನಿಯರಿಂಗ್ ಹಾಗೂ ಬೇರೆ ಕೋರ್ಸ್‌ನಲ್ಲಿ ಮೀಸಲಾತಿ ಇರುತ್ತದೆ. ಇನ್ನು ಖಾಸಗಿ ಶಾಲೆಗಳಲ್ಲಿ ಯೂನಿಟ್ ಪ್ರಾರಂಭಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಇದರ ಬಗ್ಗೆ ಖಾಸಗಿ ಶಾಲೆಯ ಪ್ರಾಂಶುಪಾಲರು ಗಮನಹರಿಸಿ ಯೂನಿಟ್ ಪ್ರಾರಂಭ ಮಾಡಿ. ಇದರಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಎಚ್.ಮಲ್ಲಿಗೆರೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿ ಕೇಂದ್ರ ಮಾಡಿ ಕ್ಯಾಂಪಸ್ ತೆರೆಯಬೇಕು ಎಂಬ ಉದ್ದೇಶದಿಂದ 2 ಎಕರೆ ಜಮೀನು ಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತವು ಇದಕ್ಕೆ ಸಹಕಾರ ನೀಡಿದೆ. ಆದ್ದರಿಂದ ಅದಕ್ಕೆ ಬೇಕಾದಂತಹ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಚಂದ್ರಕಾಂತಾ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಮುಖ್ಯಆಯುಕ್ತ ಭಕ್ತವತ್ಸಲ, ಜಿಲ್ಲಾ ಆಯುಕ್ತೆ ಕೆ.ಸಿ.ನಾಗಮ್ಮ, ಡಾ.ಅನಿಲ್ಕುಮಾರ್, ನಾಗರೇವಕ್ಕ, ಎಚ್.ವಿ.ಜಯರಾಂ, ಶಿವರಾಮೇಗೌಡ, ಪದ್ಮಾವತಿ, ಸೌಮ್ಯಲತಾ, ಮಂಜುಳಾ, ಚಂದ್ರಕಲಾ, ಸುಜಾತಾಮಣಿ, ಚಂದ್ರು, ಗಾಯಿತ್ರಿ ಇತರರಿದ್ದರು.