

ಕುಶಾಲನಗರ:
ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಆರೋಗ್ಯ, ನೈರ್ಮಲ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ಸೋಮಪ್ಪ ಹೇಳಿದರು.
ಭಾರತ್ ಸ್ಕೌಟ್ಸ್, ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಕುಶಾಲನಗರ ತಾಲೂಕು ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಶಾಲಾ ಮಕ್ಕಳ ಬೇಸಿಗೆ ಶಿಬಿರದ ಲ್ಲಿ ಭಾನುವಾರ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವುಗಳು ನಿಸರ್ಗದ ನಿಯಮಗಳನ್ನು ಪರಿಪಾಲಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಪರಿಸರ, ಪ್ರಕೃತಿ, ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದರು.
ಪರಿಸರ ಜಾಥಾದ ಮಹತ್ವ ತಿಳಿಸಿದ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ತರಬೇತಿ ಆಯುಕ್ತ ಕೆ.ಯು. ರಂಜಿತ್ ಸ್ಕೌಟ್ಸ್, ಗೈಡ್ಸ್ ಮತ್ತು ರೇಂಜರ್ಸ್ ಹಾಗೂ ರೋವರ್ಸ್ ಸ್ವಯಂ ಸೇವಕರು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ಇಂತಹ ಪರಿಸರ ಜಾಗೃತಿ ಜಾಥಾಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕೆ ಸಿ.ಎಂ. ಸುಲೋಚನಾ ಮಾತನಾಡಿ, ಇಂತಹ ಪರಿಸರ ಜಾಥಾಕ್ಕೆ ಎಲ್ಲರೂ ಸಹಕರಿಸುವ ಮೂಲಕ ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಕೆ.ವಿ. ಅರುಣ್, ಕಾರ್ಯದರ್ಶಿ ಎಂ.ಎಸ್. ಗಣೇಶ್, ಸಹ ಕಾರ್ಯದರ್ಶಿ ಎಸ್.ಆರ್. ಶಿವಲಿಂಗ, ಶಾಲಾ ಮುಖ್ಯ ಶಿಕ್ಷಕಿ ವಿಜಯ, ಗೈಡ್ಸ್ ಶಿಕ್ಷಕಿಯರಾದ ಕೆ.ಟಿ. ಸೌಮ್ಯ, ಶಿಫಾನತ್, ಸ್ಕೌಟ್ಸ್ ಮಾಸ್ಟರ್‌ಗಳಾದ ಜಾನ್‌ಸನ್, ಡಿ.ವಿ.ಗಣೇಶ್, ಕೆ.ಬಿ. ಗಣೇಶ್ ಇತರರು ಇದ್ದರು.
ಮುಳ್ಳುಸೋಗೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಹೊರಟ ಪರಿಸರ ಜಾಥಾದಲ್ಲಿ ಪರಿಸರ ಸಂರಕ್ಷಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಮುಳ್ಳುಸೋಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.