ಅಪರೂಪದ ಚೇಳುಜೇಡ ಪತ್ತೆ ; ದೇಶದಲ್ಲೇ ಅತ್ಯಂತ ವಿರಳ ಕೀಟ

25Tmk_Chelu_Jeda_02
Published on

ತುಮಕೂರು: ದೇಶದಲ್ಲಿಯೇ ಅತ್ಯಂತ ವಿರಳ ಎನಿಸಿರುವ ಚೇಳಿನ ರೂಪದ ಜೇಡವೊಂದು ಚೇಳೂರಿನಲ್ಲಿ ಪತ್ತೆಯಾಗಿದೆ. ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜೇಡವು ಜೀವವೈವಿಧ್ಯ ವಿಜ್ಞಾನಿ, ಪಕ್ಷಿ ಪ್ರೇಮಿ ಮಂಜುನಾಥ ಎಸ್.ನಾಯಕ ಹಾಗೂ ಸುನಿಲ್ ಕುಮಾರ್ ಮರಳಕುಂಟೆ ಪಕ್ಷಿ ವೀಕ್ಷಣೆ ಮಾಡುತ್ತಿರುವಾಗ ಗೋಚರಿಸಿದ್ದು ಅದರ ಛಾಯಾಚಿತ್ರ ಸೆರೆ ಹಿಡಿದಿದ್ದಾರೆ.

ನಿಶಾಚರಿ!: ಈ ಜೇಡ ರ‌್ಯಾಗೋಡಿಡಿ ಕುಟುಂಬದ ರ‌್ಯಾಗೋಡಿಮಾ ಪ್ರಭೇದಕ್ಕೆ ಸೇರಿದ್ದಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಒಂಟೆ ಜೇಡ ಅಥವಾ ಸೂರ್ಯ ಜೇಡ ಎಂಬ ಹೆಸರುಗಳಿಂದಲೂ ಇದನ್ನು ಕರೆಯಲಾಗುತ್ತದೆ. ರ‌್ಯಾಗೋಡಿಮಾ ಪ್ರಭೇದದ ಚೇಳು ಜೇಡ (ಸ್ಕಾರ್ಪಿನ್ ಸ್ಪೈಡರ್) ಸಂಪೂರ್ಣ ನಿಶಾಚರಿ. ಹಗಲಿನಲ್ಲಿ ಗೋಚರಿಸುವುದು ವಿರಳ. ಸೊಲಿಫುಗೆಗಳು ದೇಶದ ಶುಷ್ಕ ಹಾಗೂ ಹುಲ್ಲುಗಾವಲಿನ ಕಾಡಿನಲ್ಲಿ ಜೀವಿಸುತ್ತವೆಯಾದರೂ ಗೋಚರಿಸುವುದು ಕಡಿಮೆ. ಚೇಳುಜೇಡಗಳ ಜೀವನ ಕ್ರಮದ ಬಗ್ಗೆ ಈವರೆಗೆ ಅಧ್ಯಯನ, ದಾಖಲೀಕರಣ ಆಗಿಲ್ಲ.

ಇಲಿಯನ್ನೂ ಬೇಟೆಯಾಡಿ ತಿನ್ನುತ್ತದೆ!: ಚೇಳೂರಿನಲ್ಲಿ ಪತ್ತೆಯಾಗಿರುವ ಚೇಳುಜೇಡ 4.5 ಸೆಂ.ಮೀ. ಇದೆ. ಇದು ವಿಷಕಾರಿಯಲ್ಲ್ಲ. ಇದರ ದೇಹರಚನೆಯು ಅರ್ಧ ಹುಸಿ ಚೇಳಿನ ರೂಪ ಹಾಗೂ ಜೇಡಗಳಂತೆ ಎಂಟು ಕಾಲಿನ ಜೋಡಣೆ ಹೊಂದಿದೆ. ಇದರ ಪ್ರಮುಖ ಆಹಾರ ಕೀಟಗಳು. ಇಲಿಗಳನ್ನೂ ಸಹ ಬೇಟೆಯಾಡಿ ತಿನ್ನಬಲ್ಲ ಸಾಮರ್ಥ್ಯ ಈ ಜೇಡಕ್ಕಿದೆ. ಶತಪದಿ, ಸಹಸ್ರಪದಿ ಹಾಗೂ ಚೇಳುಗಳನ್ನೂ ಸಹ ಈ ಜೇಡ ತಿನ್ನುತ್ತದೆ. ಕಳೆದ ತಿಂಗಳು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಪತ್ತೆಯಾಗಿತ್ತು. ಕೀಟಗಳ ಅಧ್ಯಯನ ತಂಡದ ಚಿನ್ಮಯ್ ಮಳಿಯೇ, ಹರ್ಷಿತ್, ಜಿತೇಶ್ ಹಾಗೂ ಸನತ್ ಕಣ್ಣಿಗೆ ಅಪರೂಪದ ಕೀಟ ಬಿದ್ದಿತ್ತು.

ಭಾರತದಲ್ಲಿ ವಿಶೇಷವಾಗಿ (ಸೊಲಿಫುಗೆ) ಒಂಟೆ ಜೇಡಗಳ ಕುರಿತು ಬ್ರಿಟಿಷ್ ಕಾಲದಲ್ಲಿ ಅಧ್ಯಯನ ಆಗಿದ್ದು ಬಿಟ್ಟರೆ ಈವರೆಗೆ ಹೆಚ್ಚಿನ ಅಧ್ಯಯನ ಆಗಿಲ್ಲ. ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸಲಿರುವುದರಿಂದ ಇವುಗಳ ಅಧ್ಯಯನ ಹಾಗೂ ಸಂರಕ್ಷಣೆ ಅವಶ್ಯವಾಗಿದೆ. ಮಂಜುನಾಥ ಎಸ್.ನಾಯಕ ಜೀವವೈವಿಧ್ಯ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net