ಅಂಕಗಳಿಕೆಯೇ ಉದ್ದೇಶವಾಗಬಾರದು

KDR student
ಕಡೂರಿನಲ್ಲಿ ಉಪ್ಪಾರ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ಮಲ್ನಾಡ್ ನಾಗರಾಜ್, ಲೋಕೇಶ್‌ಬಾಬು, ತಿಪ್ಪೇಶ್, ಸಪ್ತಕೋಟಿ ಧನಂಜಯ್ ಇತರರಿದ್ದರು.
Published on

ಕಡೂರು: ಪ್ರಸ್ತುತ ದಿನಗಳಲ್ಲಿ ಅಂಕಗಳಿಕೆಯ ಶಿಕ್ಷಣದ ಜತೆಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಆದ್ಯತೆ ನೀಡಿದರೆ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗಲಿದೆ ಎಂದು ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಮತ್ತು ತಾಲೂಕು ಉಪ್ಪಾರ ಸಂಘದಿಂದ ಏರ್ಪಡಿಸಿದ್ದ ಉಪ್ಪಾರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಯುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗುವ ಪಾಲಕರು ಬದುಕಿನ ಪಾಠದ ಸಂಸ್ಕಾರದ ಶಿಕ್ಷಣವನ್ನು ಬಾಲ್ಯದಲ್ಲಿಯೇ ನೀಡಿದರೆ ಹೆಚ್ಚು ಪ್ರಬುದ್ಧರಾಗುತ್ತಾರೆ. ಸಮಾಜದ ಬೆಳವಣಿಗೆಯಲ್ಲೂ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಪಟ್ಟಣದಲ್ಲಿ ಸುಸಜ್ಜಿತವಾಗಿ ನಿರ್ಮಿಸುತ್ತಿರುವ ಉಪ್ಪಾರ ಸಮುದಾಯಭವನಕ್ಕೆ ಆರ್ಥಿಕ ಶಕ್ತಿ ನೀಡಬೇಕು. ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಹೆಚ್ಚಿನ ಅನುದಾನ ದೊರಕಿಸಿಕೊಡುವ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಂಡು ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕೆಂಬ ಆಶಯ ಹೊಂದಲಾಗಿದೆ. ಇದಕ್ಕೆ ಸಮಾಜದ ಬಂಧುಗಳು ಕೈಜೋಡಿಸಬೇಕು ಎಂದು ತಿಳಿಸಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಬದಲಾವಣೆ ಸಂಕೇತ. ಸಮಾಜದ ಅಭಿವೃದ್ಧಿಗೆ ಸಂಘಟನೆ ಮತ್ತು ಶಿಕ್ಷಣ ಬಹುಮುಖ್ಯ. ವೈಯಕ್ತಿಕ ಹಿತಾಸಕ್ತಿ ಬಿಟ್ಟು ಪರಸ್ಪರ ಸಹಕಾರದೊಂದಿಗೆ ಸಂಘಟಿತರಾಗಿ ಸಮಾಜದ ಹಿತಾಸಕ್ತಿ ಕಾಪಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಬೇಕು. ಆಗ ಸಮಾಜದ ಅಭಿವೃದ್ಧಿಗೆ ಬೆಂಬಲ ದೊರೆಯುತ್ತದೆ. ಉಪ್ಪಾರ ಜನಾಂಗದ ಬಗ್ಗೆ ಅಪಾರ ಪ್ರೀತಿ, ಗೌರವವಿದೆ. ಪಟ್ಟಣದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ನನ್ನ ಇತಿಮಿತಿಯಲ್ಲಿ ಸಹಕಾರದೊಂದಿಗೆ ವೈಯಕ್ತಿಕವಾಗಿ 25 ಲಕ್ಷ ರೂ. ಒದಗಿಸಿಕೊಡುತ್ತೇನೆ. ಕಾಂಗ್ರೆಸ್ ಸರ್ಕಾರ ಉಪ್ಪಾರ ಜನಾಂಗದ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಉಪ್ಪಾರ ಜನಾಂಗಕ್ಕೆ ಸಿಗಬಹುದಾದ ನ್ಯಾಯಯುತ ಶೈಕ್ಷಣಿಕ ಮತ್ತು ಸಾಮಾಜಿಕ ಮೀಸಲಾತಿ ಹೋರಾಟಕ್ಕೆ ನನ್ನ ಸಹಮತವೂ ಇದೆ ಎಂದು ಹೇಳಿದರು.
ಮೀಸಲಾತಿ ಕೇಳುವುದು ಸರಿಯೇ?: ಅಸಮಾನತೆ ಎದುರಿಸುತ್ತಿದ್ದ ಕೆಲವು ಸಮುದಾಯಗಳು ಮೇಲ್ವರ್ಗಗಳಿಗೆ ಸಮನಾದ ಮಾನ್ಯತೆ ಪಡೆಯುತ್ತಿರುವ ದಿನಗಳಲ್ಲಿ ಕೆಲವರು ಎಸ್ಸಿ, ಎಸ್ಟಿ ಮಾನ್ಯತೆಗಾಗಿ ಹೋರಾಟ ಮಾಡುವುದು ಸರಿಯೇ ಎಂಬ ಪ್ರಶ್ನೆ ನನ್ನನ್ನು ಇಂದಿಗೂ ಕಾಡುತ್ತಿದೆ. ಎಲ್ಲೋ ಒಂದೆಡೆ ನಾವು ಪ್ರಜ್ಞಾಪೂರ್ವಕವಾಗಿಯೇ ಸಾಮಾಜಿಕವಾಗಿ ನಮ್ಮನ್ನು ನಾವೇ ಹಿಂದುಳಿಸಿಕೊಳ್ಳುತ್ತಿದ್ದೇವೆಯೇ ಎಂಬ ಚಿಂತನೆ ನನ್ನಲ್ಲಿ ಮೂಡಿದೆ. ಮತ್ತಷ್ಟು ಸಮುದಾಯಗಳಿಗೆ ಎಸ್ಸಿ, ಎಸ್ಟಿ ಮಾನ್ಯತೆ ದೊರೆತರೆ ಈಗ ಅವರಿಗೆ ದೊರೆಯುತ್ತಿರುವ ಮೀಸಲಾತಿ ಪ್ರಮಾಣ ಕಡಿಮೆಯಾಗಿ ಮತ್ತಷ್ಟು ಅಸಮಾನತೆಗೆ ಎಡೆಯಾಗುತ್ತದೆಯೇ ಎಂಬ ಆತಂಕವೂ ಇದೆ. ಹಾಗೆಂದು ನಾನು ಮೀಸಲಾತಿ ಹೋರಾಟದ ವಿರೋಧಿಯಲ್ಲ ಎಂದು ಕೆ.ಎಸ್.ಆನಂದ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಮಲ್ನಾಡ್ ನಾಗರಾಜ್, ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಟಿ.ಆರ್.ಲಕ್ಕಪ್ಪ, ವೈ.ಎಂ.ತಿಪ್ಪೇಶ್, ತಾಲೂಕು ಅಧ್ಯಕ್ಷ ಎನ್.ಲೋಕೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಸಪ್ತಕೋಟಿ ಧನಂಜಯ, ಜಿ.ಸತೀಶ್, ಜಿ.ಎಂ.ಲಕ್ಷ್ಮಣ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಪಂಕಜಾ, ಎಂ.ಕೆ.ಸತೀಶ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಹಾಗೂ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net