

ಪುತ್ತೂರು ಗ್ರಾಮಾಂತರ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾರು ಮತ್ತು ಸ್ಕೂಟರ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ಇಸ್ಮಾಯಿಲ್ ಯಾನೆ ಉಸ್ಮಾನ್(58) ಮೃತಪಟ್ಟಿದ್ದಾರೆ.
ಇಸ್ಮಾಯಿಲ್ ಮಂಗಳವಾರ ಬೆಳಗ್ಗೆ ಕಲ್ಲರ್ಪೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ಕಾರು ಸ್ಕೂಟರನ್ನು ಸುಮಾರು 15 ಮೀಟರ್‌ನಷ್ಟು ದೂರ ದೂಡಿಕೊಂಡು ಹೋಗಿದ್ದು, ಗಂಭೀರ ಗಾಯಗೊಂಡಿದ್ದ ಇಸ್ಮಾಯಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಸ್ಕೂಟರ್ ನಜ್ಜುಗುಜ್ಜಾಗಿದೆ.
ಕೆಮ್ಮಿಂಜೆ, ಕುರಿಯ ಭಾಗದಲ್ಲಿ ಮನೆಗಳಿಗೆ ತೆರಳಿ ಅಡಕೆ ಖರೀದಿ ವ್ಯಾಪಾರಿಯಾಗಿದ್ದ ಇಸ್ಮಾಯಿಲ್ ವ್ಯವಹಾರದಲ್ಲಿ ನಷ್ಟ ಹೊಂದಿದ ಬಳಿಕ ಕಲ್ಲರ್ಪೆಯಲ್ಲಿ ಸಣ್ಣ ಜಮೀನು ಖರೀದಿಸಿದ್ದರು. ಅಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಕಾರಿನಲ್ಲಿದ್ದ ಇಬ್ಬರು ಮಕ್ಕಳು, ಮಹಿಳೆ ಸಹಿತ ನಾಲ್ವರ ಪೈಕಿ ಗರ್ಭಿಣಿಯೊಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಇಸ್ಮಾಯಿಲ್ ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.