

ಪಡುಬಿದ್ರಿ: ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಸಂದು ದಾಂತಿ ಗರೋಡಿ ಬಳಿ ಸೋಮವಾರ, ರಸ್ತೆಗೆ ಅಡ್ಡ ಬಂದ ನವಿಲೊಂದಕ್ಕೆ ಸ್ಕೂಟರ್ ಡಿಕ್ಕಿಯಾಗಿ, ನಿಯಂತ್ರಣ ಕಳೆದುಕೊಂಡ ಸವಾರ ಕಲ್ಲಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ನವಿಲು ಕೂಡ ಸ್ಥಳದಲ್ಲಿಯೇ ಅಸುನೀಗಿದೆ.
ಬೆಳಪು ಪ್ರಸಾದ ನಗರ ನಿವಾಸಿ ಅಬ್ದುಲ್(25) ಮೃತಪಟ್ಟ ಯುವಕ. ಪಡುಬಿದ್ರಿಯಲ್ಲಿ ಮೊಬೈಲ್ ದುರಸ್ತಿ ಅಂಗಡಿ ನಡೆಸುತ್ತಿದ್ದ ಅಬ್ದುಲ್, ಎರ್ಮಾಳಿನಲ್ಲಿ ಸ್ಕೂಟರ್ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಹಾರಿ ಬಂದ ನವಿಲು ಸ್ಕೂಟರ್ ತಾಗಿತ್ತು. ಅಪಘಾತದ ತೀವ್ರತೆಗೆ ನವಿಲು ಸ್ಥಳದಲ್ಲೇ ಮೃತಪಟ್ಟರೆ, ರಸ್ತೆಯಂಚಿನ ಕಲ್ಲಿಗೆ ತಗುಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಅಬ್ದುಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ ಸಕಾಲದಲ್ಲಿ ಆಂಬುಲೆನ್ಸ್ ಆಗಮಿಸದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ವಾಹನದಲ್ಲಿ ಸಾಗಿಸಲಾಯಿತಾದರೂ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು. ಎರಡೂ ಪ್ರಕರಣಗಳು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.