ಗ್ಯಾರಂಟಿಗಾಗಿ ಜನರ ಬೇಬಿಗೆ ಕತ್ತರಿ: ಬಿಜೆಪಿ ಆಕ್ರೋಶ

bjp protest
ತೈಲ ದರ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರ ಮನವೊಲಿಸುತ್ತಿರುವ ಪೊಲೀಸರು. ಸುರೇಖಾ ಮುರಳೀಧರ್, ಪ್ರಭಾಕರ್, ವಿಶ್ವನಾಥ್ ಇತರರಿದ್ದರು.
Published on

ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಗುರುವಾರ ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಶಿವಮೊಗ್ಗದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ತೈಲ ಬೆಲೆ ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕರೆಯ ಮೇರೆಗೆ ಬಿಜೆಪಿ ನಗರ ಸಮಿತಿ ಪ್ರಮುಖರು, ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಗ್ಯಾರಂಟಿ ಘೋಷಣೆಯೊಂದಿಗೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಭಿವೃದ್ಧಿಯನ್ನೇ ಮರೆತಿದೆ. ಈಗ ಫಲಾನುಭವಿಗಳಿಗೆ ಕೆಲ ಗ್ಯಾರಂಟಿ ಯೋಜನೆಗಳೂ ಸಿಗುತ್ತಿಲ್ಲ. ಸಾಲದೆಂಬಂತೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಜನರ ಜೇಬಿಗೆ ನೇರವಾಗಿ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ನುಡಿದಂತೆ ನಡೆಯುತ್ತಿಲ್ಲ. ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಹಿಂದುಳಿದ, ದಲಿತರ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳಲಾಗಿದೆ. ನಿಗಮ, ಮಂಡಳಿಗಳ ಹಣ ಬೇರೆ ಖಾತೆಗಳಿಗೆ ವರ್ಗಾವಣೆ ಆಗುತ್ತಿದೆ. ಅನೇಕ ಸರ್ಕಾರಿ ನೌಕರರಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಮೂರು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೂ ಗೌರವಧನ ನೀಡಿಲ್ಲ. ಒಂದೆಡೆ ಉಚಿತ ಕೊಡುಗೆ, ಇನ್ನೊಂದೆಡೆ ಜನರ ಮೇಲೆ ಹೊರೆ. ಇದು ಕಾಂಗ್ರೆಸ್ ಸರ್ಕಾರದ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಎಸ್.ಜ್ಞಾನೇಶ್ವರ್, ಸಿ.ಎಚ್.ಮಾಲತೇಶ್, ಅನಿತಾ ರವಿಶಂಕರ್, ಸುರೇಖಾ ಮುರಳೀಧರ್, ರಾಹುಲ್ ಬಿದರೆ, ವಿಶ್ವನಾಥ್, ಪ್ರಭಾಕರ್, ಪ್ರಮುಖರಾದ ಕಿರಣ್, ವಿಕ್ರಂ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net