

ಕಲಬುರಗಿ: ಆಕಾಶದಲ್ಲಿನ ಗೃಹಗಳ ಚಲನೆ, ರಾಕೆಟ್ ಕಾರ್ಯಶೈಲಿ, ಭೂಗೋಳದ ಚಲನೆ, ಕಸದಿಂದ ರಸ, ಚಿತ್ತ ಶುದ್ಧಿ ಮಾಡುವ ಬಜ್ ವೈರ್ ಗೇಮ್ ರಚನೆ, ಹನಿ ನೀರಾವರಿ ಸೇರಿ ವಿವಿಧ ವಿಜ್ಞಾನ, ಕಲೆ, ಜ್ಞಾನ ಪ್ರಸರಣದ ಮಾದರಿಗಳನ್ನು ಪುಟ್ಟ ಮಕ್ಕಳು ವಿವರಿಸಿ, ಜ್ಞಾನ ಬಿತ್ತುವ ಅದನ್ನು ಶ್ರದ್ಧೆಯಿಂದ ಆಲಿಸುವ ಸಾವಿರಾರು ಪೋಷಕರು, ಪ್ರೇಕ್ಷಕರ ಸಮ್ಮಿಲನ....
ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಗರದ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಇ)ಯಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಶೈಕ್ಷಣಿಕ ವಸ್ತು ಪ್ರದರ್ಶನವೂ ಶಾಲೆಗೆ ಹಬ್ಬದ ಕಳೆ ತಂದಿದ್ದು, ಮಕ್ಕಳು ವಿಜ್ಞಾನ, ಕಲೆ, ಕ್ರೀಡೆ, ಸಂಸ್ಕೃತಿಯ ಪ್ರದರ್ಶನವನ್ನು ಮಾಡಿ, ಗಮನ ಸೆಳೆದರು.
ಶಾಲೆಯ ೨ನೇ ತರಗತಿಯಿಂದ ೯ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳು ಪ್ರತ್ಯೇಕವಾದ ಪ್ರದರ್ಶನದಲ್ಲಿ ಸಕ್ರೀಯವಾಗಿದ್ದು, ಸುಮಾರು ೬೦೦ಕ್ಕೂ ಹೆಚ್ಚು ವಿಜ್ಞಾನ, ಕಲೆ, ಸಂಸ್ಕೃತಿ, ಕ್ರೀಡಾ ಮಾದರಿಗಳು ಪ್ರದರ್ಶನ ನಡೆಯಿತು. ಪುಟ್ಟ ಮಕ್ಕಳು ತಮ್ಮ ಪ್ರದರ್ಶಿನಿ ಕುರಿತು ಸಮಗ್ರವಾಗಿ ಮಾಹಿತಿ ನೀಡಿ, ಅದರ ಸದುಪಯೋಗದ ಕುರಿತು ವಿವರಣೆ ನೀಡಿದರು.
ಕಲಾ ವಿಭಾಗದಲ್ಲಿ ಮಕ್ಕಳ ಕುಂಚದಲ್ಲಿ ಅರಳಿದ ಚಿತ್ರಕಲೆಗಳು, ಕಸ ಎಂದು ಬಿಸಾಡಿದ ವ್ಯರ್ಥ ಸಾಮಗ್ರಿಯಿಂದ ರಚಿಸಿದ ಜುರಾಸಿಕ್ ಪಾರ್ಕ್, ಅಲಂಕಾರಿಕ ವಸ್ತು, ಬೀಸುಗಾಳಿ, ಹೂವು, ಕುಂಡಲ, ವೈವಿಧ್ಯಮಯ ಚಿತ್ರಗಳು ಪ್ರೇಕ್ಷಕರ ಮನ ಸೆಳೆದವು.
ವಿಜ್ಞಾನ ವಿಭಾಗದಲ್ಲಿ ಚಂದ್ರಯಾನ-೩, ರಾಡಾರ ಸಿಸ್ಟಮ್, ನೀರು ವ್ಯರ್ಥ ಆಗದಂತೆ ಅಲಾರಾಂ, ಸ್ಯಾಟಲೈಟ್ ನಿಯಂತ್ರಣ, ಬಜ್‌ವೈರ್, ಭೂಕಂಪ ಮಾಪನ, ಬೀದಿ ದೀಪ ನಿಯಂತ್ರಣ, ಬಬಲ್ ಮಶಿನ್, ಲೇಸರ್ ಸೆಕ್ಯುರಿಟಿ ಸಿಸ್ಟಮ್, ಕೃಷಿ, ತೋಟಗಾರಿಕೆ, ಡ್ರಾಯಿಂಗ್ ರೂಂ ರೊಬೋಟ್, ಹನಿ ನೀರಾವರಿ, ಡಯಾಲಿಸಿಸ್ ಪ್ರಕ್ರಿಯೆ, ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‌ಮೆಂಟ್, ತಂಪು ಪಾನಿಯ ಆಘಾತಕಾರಿ ಎಂಬುದು ಸೇರಿ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮಾದರಿಗಳ ಪ್ರದರ್ಶನವನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿ, ವೀಕ್ಷಕರಿಗೆ ಮಾಹಿತಿ ನೀಡಿ, ಜ್ಞಾನ ವಿಸ್ತಾರದ ಜತೆಗೆ ಮಾಹಿತಿ ವಿನಿಮಿಯ ಮಾಡಿಕೊಂಡರು. ಮತ್ತೊಂದೆಡೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇಸ್ರೋ ಹಿರಿಯ ವಿಜ್ಞಾನಿ ಡಾ.ಟಿ.ಎನ್.ಸುರೇಶಕುಮಾರ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಪಾಟೀಲ್, ಎಸ್‌ಬಿ ಪಾಟೀಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾAತ ಪಾಟೀಲ್, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೈಲಾಶ ಪಾಟೀಲ್, ಪ್ರಾಂಶುಪಾಲ ಕೆ.ರವಿಕುಮಾರ, ಉಪ ಪ್ರಾಂಶುಪಾಲ ಆಕಾಶ ಉಬಾಳೆ ಇತರರಿದ್ದರು.
ಶಾಲೆಗೆ ಸ್ಪೇಸ್ ಲ್ಯಾಬ್, ಬರಲಿದೆ ವಿಮಾನ: ಚಂದ್ರಕಾಂತ ಪಾಟೀಲ್ ಶಾಲೆಯೂ ಶಿಕ್ಷಣದ ಜತೆಗೆ ಪ್ರಾಯೋಗಿಕ ಜ್ಞಾನ ನೀಡುತ್ತಿದೆ. ಅಧ್ಯಯನ ಮತ್ತು ಸಂಸ್ಕೃತಿಯನ್ನು ಬಿ.ಜಿ.ಪಾಟೀಲ್ ಅವರ ಕುಟುಂಬ ಮುಂದುವರಿಸಿದ್ದು, ಶ್ರೇಷ್ಠವಾದ ವಿದ್ಯಾದಾನದಲ್ಲಿ ತೊಡಗಿದ್ದಾರೆ. ಇಂತಹ ಪರಂಪರೆಯನ್ನು ಹೊಂದಿರುವ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಗೆ ಯಾಮಿಕಾ ಸ್ಪೇಸ್ ಏಜೆನ್ಸಿಯಿಂದ ಸ್ಪೆಸ್ ಲ್ಯಾಬ್ ನೀಡಲಾಗುವುದು ಎಂದು ಇಸ್ರೋ ಹಿರಿಯ ವಿಜ್ಞಾನಿ ಡಾ.ಟಿ.ಎನ್.ಸುರೇಶಕುಮಾರ ಘೋಷಿಸಿದರು. ಈ ಲ್ಯಾಬ್ ಕಾರ್ಯಚರಿಸುವ ವಿಮಾನ, ಡ್ರೋನ್‌ಗಳು, ಬಾಹ್ಯಾಕಾಶ ವೀಕ್ಷಣೆ ಯಂತ್ರಗಳು ಸೇರಿ ಹಲವು ಅತ್ಯಾಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಹೊಂದಿರುತ್ತದೆ. ವಿಮಾನ ಚಾಲನೆ, ಡ್ರೋನ್ ಚಾಲನೆ ತರಬೇತಿ ಈ ಲ್ಯಾಬ್‌ನಲ್ಲಿ ದೊರೆಯುತ್ತದೆ. ವಿದ್ಯಾರ್ಥಿ ಹಂತದಲ್ಲೇ ಹೊಸ ಹೊಸ ತಂತ್ರಜ್ಞಾನ, ಮಾಹಿತಿ ದೊರೆತರೆ ಭವಿಷ್ಯದಲ್ಲಿ ವಿಷಯದ ಆಯ್ಕೆಗೆ ಪೂರಕ ಆಗುವ ಜತೆಗೆ ಉದ್ಯೋಗ ಪಡೆಯಲು ಸಹಕಾರಿ ಆಗಲಿದೆ. ಯಾಮಿಕಾ ಸ್ಪೇಸ್ ಏಜೆನ್ಸಿಯೂ ಇಸ್ರೋ ಸಂಸ್ಥೆಯಿಂದ ಪ್ರಮಾಣಿತವಾಗಿದ್ದು, ಅದರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಸುರೇಶಕುಮಾರ ತಿಳಿಸಿದರು.
ವಿಜ್ಞಾನವೆಂದರೆ ಜ್ಞಾನ. ಉತ್ತಮ ತರಬೇತಿ, ಸೌಲಭ್ಯಗಳು ಹಿಂದೆ ಇರಲಿಲ್ಲ. ಪ್ರಸ್ತುತ ಎಲ್ಲ ಸೌಲಭ್ಯಗಳಿದ್ದು, ಇಂತಹ ಪ್ರದರ್ಶಿನಿಯಿಂದ ಜ್ಞಾನ ವಿಸ್ತಾರವಾಗುತ್ತದೆ. ಇಂತಹ ಚಟುವಟಿಕೆ ಹೆಚ್ಚಬೇಕು. ಡ್ರೋನ್, ಎರೋಸ್ಪೆಸ್ ಇಂಜಿನಿಯರಿಂಗ್ ಬಗ್ಗೆ ಪುಟ್ಟ ಮಕ್ಕಳು ಜ್ಞಾನ ಪಡೆದಿದ್ದು, ವಿಶೇಷ. ಎಲ್ಲರೂ ವಿಜ್ಞಾನ ಕ್ಷೇತ್ರದ ಆಸಕ್ತ ಮಕ್ಕಳಿಗೆ ಪ್ರೋತ್ಸಾಹಿಸಬೇಕು. ವಿಜ್ಞಾನ ನಂಬಿಕೆಗಳ ವಿರುದ್ಧವಲ್ಲ. ಆದರೆ ಜ್ಞಾನ ಹೊಂದಿರಬೇಕು. | ಡಾ.ಟಿ.ಎನ್.ಸುರೇಶಕುಮಾರ ಇಸ್ರೋ ಹಿರಿಯ ವಿಜ್ಞಾನಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಅವಶ್ಯವಿದೆ. ಆಗ ಮಾತ್ರ ಶಿಕ್ಷಣದ ಪರಿಪೂರ್ಣ ಲಾಭ ಭವಿಷ್ಯದಲ್ಲಿ ದೊರೆಯುತ್ತದೆ. ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣ, ತೋಟಗಳಿಗೆ, ವಿಜ್ಞಾನ ಕೇಂದ್ರಗಳು, ಕೈಗಾರಿಕೆಗಳಿಗೆ ಕರೆದುಕೊಂಡು ಹೋಗಿ ಮಾಹಿತಿ ನೀಡಲಾಗುತ್ತದೆ. ಆಲೂಗಡ್ಡೆ ಹೇಗೆ ಬೆಳೆಯುತ್ತದೆ ಎಂಬ ಮಾಹಿತಿ ಇಲ್ಲದಂತ ಸ್ಥಿತಿ ಇದೆ. ಆದ್ದರಿಂದ ನಮ್ಮ ಶಾಲೆಯಲ್ಲಿ ಶಿಕ್ಷಣದ ಜತೆಗೆ ವಿಜ್ಞಾನ, ಸಂಸ್ಕೃತಿ, ಕಲೆಯ ಮಾಹಿತಿ ನೀಡಲಾಗುತ್ತಿದೆ. | ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ