ಕಲ್ಲುಗಳ ಮೇಲೆ 'ಕರಾವಲೆನ್ಸ್'; ರಾಜ್ಯದ ಮುಡಿಗೊಂದು ಹೊಸ ಗಿಡ

Lead Story
Published on

| ರಮೇಶ ದೊಡ್ಡಪುರ ಬೆಂಗಳೂರು

ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಜೀವವೈವಿಧ್ಯ ಹೊಂದಿರುವ ತಾಣ ಎಂದು ಗುರುತಿಸಿರುವ ಪಶ್ಚಿಮಘಟ್ಟ ಪರ್ವತ ಶ್ರೇಣಿಗಳ ಕರ್ನಾಟಕ ಪರಿಸರದಲ್ಲಿ ಮತ್ತೊಂದು ಹೊಸ ಸಸ್ಯ ಪ್ರಭೇದವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಪೈಪ್​ವರ್ಟ್ ಎನ್ನಲಾಗುವ ಎರಿಯೋಕಾಲನ್ ಪ್ರಭೇದಕ್ಕೆ ಹೋಲುವ ಈ ಸಣ್ಣ ಸಸ್ಯವು ಪಶ್ಚಿಮಘಟ್ಟದ ಉತ್ತರ ಕನ್ನಡ ಜಿಲ್ಲೆ ಕುಮಟಾ ಭಾಗದ ಲ್ಯಾಟರೈಟ್ ಕಲ್ಲುಗಳ ಮೇಲೆ ಪತ್ತೆಯಾಗಿದೆ. ಕೇಂದ್ರ ಸರ್ಕಾರದ ಅಧೀನದ ಸ್ವಾಯತ್ತ ಸಂಸ್ಥೆಯಾಗಿರುವ ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆ(ಎಆರ್​ಐ) ವಿಜ್ಞಾನಿಗಳ ಈ ಸಂಶೋಧನೆಯು ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟ ಮಾಡಲಾಗಿದ್ದು, ಕರ್ನಾಟಕದ ‘ಕರಾವಳಿ’ ಹೋಲುವ ‘ಎರಿಯೋಕಾಲನ್ ಕರಾವಲೆನ್ಸ್’ ಎಂದು ನಾಮಕರಣ ಮಾಡಿದೆ. ಈಗಾಗಲೆ 1,814 ಹೂಬಿಡದ ಪ್ರಭೇದಗಳಿಂದ ಸಂಪದ್ಭರಿತವಾಗಿದ್ದ ಪಶ್ಚಿಮಘಟ್ಟಕ್ಕೆ ಹೊಸ ಪ್ರಭೇದ ಸೇರ್ಪಡೆಯಾಗಿದೆ.

ಎರಡು ಪ್ರಭೇದಗಳ ಪತ್ತೆ: ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಸಹ್ಯಾದ್ರಿ ಪರ್ವತ ಶ್ರೇಣಿಗಳು ಎಂದು ಕರೆಯಲ್ಪಡುವ ಪಶ್ಚಿಮಘಟ್ಟದಲ್ಲಿ ಎಆರ್​ಐ ವಿಜ್ಞಾನಿಗಳು ಜೀವವೈವಿಧ್ಯ ಸಂಶೋಧನೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹೊಸ ಸೇರ್ಪಡೆಯಾಗುವ ಎರಡು ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಒಂದು ಪ್ರಭೇದ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಎರಿಯೋಕಾಲನ್ ಪರ್ವಿಸೆಫಾಲಂ ಎಂದು ನಾಮಕರಣ ಮಾಡಿದ್ದಾರೆ. ಕರ್ನಾಟಕದ ಕುಮಟಾದಲ್ಲಿ ಪತ್ತೆಯಾಗಿರುವ ಪ್ರಭೇದಕ್ಕೆ ಎರಿಯೋಕಾಲನ್ ಕರಾವಲೆನ್ಸ್ ಎಂದು ಹೆಸರಿಡಲಾಗಿದೆ. ಡಾ. ರಿತೇಶ್ ಕುಮಾರ್ ಚೌಧರಿ ನೇತೃತ್ವದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದ್ದು, ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಾದ ಫೈಟೊಟಾಕ್ಸಾ ಹಾಗೂ ಅನಲೀಸ್ ಬೊಟಾನಿಸಿ ಫೆನ್ನಿಸಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ.

ಗುರುತಿಸುವುದು ಕಷ್ಟ ಪೈಪ್​ವರ್ಟ್ ಎಂದು ಸಾಮಾನ್ಯ ಹೆಸರಿನಲ್ಲಿ ಕರೆಯಲಾಗುವ ಎರಿಯೋಕಾಲನ್ ಸಸ್ಯದ 111 ಪ್ರಭೇದಗಳು ಇಲ್ಲಿವರೆಗೆ ಭಾರತದಲ್ಲಿ ಪತ್ತೆಯಾಗಿವೆ. ಬಹುತೇಕ ಒಂದನ್ನೊಂದು ಹೋಲುತ್ತವೆ. ಈ ಸಸ್ಯಗಳು ಹಾಗೂ ಹೂಗಳು ಅತ್ಯಂತ ಸಣ್ಣದಾಗಿದ್ದು, ಪತ್ತೆ ಮಾಡುವುದು ಕಷ್ಟ. ಹಾಗಾಗಿ ಜೀವವರ್ಗೀಕರಣ ಶಾಸ್ತ್ರಜ್ಞರಿಗೆ ಈ ಸಸ್ಯಗಳನ್ನು ಗುರುತಿಸುವುದು ಅತ್ಯಂತ ಕಷ್ಟದ ಕೆಲಸ. ಪರೀಕ್ಷೆಗಳ ಮೂಲಕ ಹೊಸ ಪ್ರಭೇದವನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಪತ್ತೆಯಾಗಬೇಕಿದೆ ಔಷಧೀಯ ಗುಣ

ಪಶ್ಚಿಮಘಟ್ಟ ಹಾಗೂ ಹಿಮಾಲಯದಲ್ಲಿ ದೊರಕುವ ಶೇ.70 ಪ್ರಭೇದಗಳು ಪ್ರದೇಶ ವೈಶಿಷ್ಟ್ಯೆ ಹೊಂದಿವೆ. ಪೈಪ್​ವರ್ಟ್ ಪ್ರಭೇದದ ಎರಿಯೋಕಾಲನ್ ಸಿನೇರಿಯಂ ಎಂಬ ಸಸ್ಯವು ಕ್ಯಾನ್ಸರ್ ಗುಣಪಡಿಸುವ, ಉರಿಯೂತ ವಿರೋಧಿ ಹಾಗೂ ಚರ್ಮಸಂಬಂಧಿ ಕಾಯಿಲೆ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಎರಿಯೋಕಾಲನ್ ಕ್ವಿಂಕ್ವಾಂಗ್ಯುಲಾರ್ ಎಂಬ ಸಸ್ಯವನ್ನು ಯಕೃತ್ತಿನ ಕಾಯಿಲೆ ಗುಣಪಡಿಸಲು ಬಳಸಲಾಗುತ್ತದೆ. ಎರಿಯೋಕಾಲನ್ ಮದಾಯಿಪರೆನ್ಸ್ ಸಸ್ಯವನ್ನು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗಾಗಿ ಔಷಧದಲ್ಲಿ ಬಳಸಲಾಗುತ್ತದೆ. ಇದೀಗ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೊಸದಾಗಿ ಪತ್ತೆಯಾಗಿರುವ ಪ್ರಭೇದದ ಔಷಧೀಯ ಗುಣಗಳನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಿಂದೆ ಪತ್ತೆಯಾಗಿರುವ ಸಸ್ಯಕ್ಕಿಂತ ವಿಭಿನ್ನವಾದ ಗುಣಲಕ್ಷಣಗಳನ್ನು ಈ ಸಸ್ಯದಲ್ಲಿ ಗುರುತಿಸಲಾಗಿದೆ. ಅದನ್ನು ಖಚಿತಪಡಿಸಿಕೊಳ್ಳಲು ಅವುಗಳ ಡಿಎನ್​ಎ ಹಾಗೂ ಮಾರ್ಫಾಲಜಿ ಪರೀಕ್ಷೆ ನಡೆಸಲಾಗಿದೆ.| ಡಾ. ರಿತೇಶ್ ಕುಮಾರ್ ಚೌಧರಿ ಎಆರ್​ಐ ಸಂಶೋಧಕ

ಕುಮಟಾ, ಹೊನ್ನಾವರ ಹಾಗೂ ಅಂಕೋಲಾದ ಕೆಲ ಭಾಗಗಳ ಚಿರೆಕಲ್ಲಿನ ಗುಡ್ಡಗಳ ಸಮತಟ್ಟಾದ ಪ್ರದೇಶದಲ್ಲಿ ಮಳೆಗಾಲದಲ್ಲಿ ಎಲೆಯಿಲ್ಲದ ಈ ಸಸ್ಯಗಳು ಬೆಳೆಯುತ್ತವೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅವಧಿಗೆ ಅವು ಹೂವು ಬಿಡುತ್ತವೆ. ಎರಿಯೋಕಾಲನ್ ಪ್ರಭೇದದಲ್ಲಿ 111 ಕ್ಕೂ ಅಧಿಕ ಜಾತಿಗಳಿವೆ. ವಿಜ್ಞಾನಿಗಳು ಅದರಲ್ಲಿ ಒಂದನ್ನು ಈ ಪ್ರದೇಶದಲ್ಲೂ ಗುರುತಿಸಿರಬಹುದು.

| ಡಾ.ಪ್ರಕಾಶ ಮೇಸ್ತಾ ಪರಿಸರ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net